2026-06-08 03:29:20

2 ವರ್ಷದಲ್ಲಿ 5,394 ರೈತರ ಆತ್ಮಹತ್ಯೆ: ಅನ್ನದಾತರ ಸಮಾಧಿಯ ಮೇಲೆ ಸಾಧನಾ ಸಮಾವೇಶ: ಕೇಂದ್ರ ಕುಮಾರಸ್ವಾಮಿ ಆರೋಪ|Speed News Kannada

2 ವರ್ಷದಲ್ಲಿ 5,394 ರೈತರ ಆತ್ಮಹತ್ಯೆ: ಅನ್ನದಾತರ ಸಮಾಧಿಯ ಮೇಲೆ ಸಾಧನಾ ಸಮಾವೇಶ: ಕೇಂದ್ರ ಕುಮಾರಸ್ವಾಮಿ ಆರೋಪ|Speed News Kannada

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮುಚ್ಚಿಟ್ಟಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಇತ್ತೀಚೆಗೆ ನಾನು ಪತ್ರಿಕೆಯೊಂದರಲ್ಲಿ ಅನ್ನದಾತರ ಆತ್ಮಹತ್ಯೆ ಹೆಚ್ಚಳ ಎನ್ನುವ ವರದಿಯೊಂದನ್ನು ಓದಿದೆ. ಅದನ್ನು ಓದಿ ನನಗೆ ತೀವ್ರ ಆಘಾತ ಉಂಟಾಯಿತು. ಈ ವರದಿಯನ್ನು ಓದಿ ಈ ಸರ್ಕಾರ ಕಣ್ತೆರೆಯುತ್ತದೆ ಎಂದು ಭಾವಿಸಿದ್ದೆ. ಆದರೆ, ಸಾಧನಾ ಸಮಾವೇಶಗಳನ್ನು ಮಾಡುವುದರಲ್ಲಿ  ಸಂಭ್ರಮಿಸುತ್ತಿರುವ ಈ ಸರ್ಕಾರಕ್ಕೆ ರೈತರ ಹಿತಾಸಕ್ತಿ ಬೇಕಾಗಿಲ್ಲ ಎಂದು ಕಿಡಿಕಾರಿದರು.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಪ್ರಕಾರ ರಾಜ್ಯದಲ್ಲಿ 2023ರಲ್ಲಿ 2,423 ಹಾಗೂ 2024ರಲ್ಲಿ 2,971 ರೈತರು, ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ಒಟ್ಟು 5,394 ರೈತರು ಜೀವ ಚೆಲ್ಲಿದ್ದಾರೆ. ಮಹಾರಾಷ್ಟ್ರದ ನಂತರ ಕರ್ನಾಟಕ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯ ಸರಕಾರಕ್ಕೆ ಈ ಅಂಕಿ ಅಂಶಗಳು ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ಮುಚ್ಚಿಟ್ಟಿದೆಯೇ ಎನ್ನುವ ಅನುಮಾನ ಕಾಡುತ್ತಿದೆ ಎಂದು ದೂರಿದರು.

ಇಷ್ಟು ಬೃಹತ್ ಪ್ರಮಾಣದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಈ ಸರ್ಕಾರದವರು ಜಾಣ್ಮೆಯಿಂದ ಮುಚ್ಚಿಟ್ಟಿದಾರೆ. ಈ ಆತ್ಮಹತ್ಯೆಗಳ ಸಮರ್ಪಣೆಗಾಗಿ ತುಮಕೂರಿನಲ್ಲಿ ಇವರು ಸಮಾವೇಶ ಮಾಡಿದ್ದಾರೆ ಎಂದು ತೀಕ್ಷ್ಣವಾಗಿ ಕೇಂದ್ರ ಸಚಿವರು ಪ್ರಶ್ನಿಸಿದರು.

ಈ ಸರಕಾರ ರೈತರ ಜೀವನದ ಮೇಲೆ ಸಮಾಧಿ ಕಟ್ಟಿ, ಅದರ ಮೇಲೆ ತಮ್ಮ ವೈಭವ ಪ್ರದರ್ಶನ ಮಾಡುತ್ತಿದ್ದಾರೆ. ಇವರನ್ನು ಜನ ಕ್ಷಮಿಸುವುದಿಲ್ಲ. ಒಂದೆಡೆ ರೈತರು ನಿತ್ಯವೂ ಸಾಯುತ್ತಿದ್ದಾರೆ ಇವರು ಗ್ಯಾರಂಟಿ ಹೆಸರಿನಲ್ಲಿ ಹಬ್ಬ ಮಾಡುತ್ತಿದ್ದಾರೆ. ಇವರ ಗ್ಯಾರಂಟಿಗಳು ಉತ್ತಮವಾಗಿ ಇದ್ದಿದ್ದರೆ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಸಚಿವ ಕುಮಾರಸ್ವಾಮಿ ಅವರು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸಿದರು.

ಸಮಾವೇಶದ ಹೆಸರಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಕಳೆದ ವರ್ಷ ಕೂಡ ಹಕ್ಕು ಪತ್ರಗಳ ಬಗ್ಗೆಯೇ ಹೆಚ್ಚು ಚರ್ಚೆ ಮಾಡಿದ್ದರು. ನಮ್ಮ ಬಳಿ ಬರುವ ರೈತರು ಹಾಗೂ ಅನೇಕ ಜಿಲ್ಲೆಗಳಲ್ಲಿ ನಾವು ಹೋದಾಗ ಕಂದಾಯ ಇಲಾಖೆಯ ಬಗ್ಗೆಯೇ ಹೆಚ್ಚು ದೂರು, ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. 6ನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಕೊಡುತ್ತಿದ್ದೇವೆ ಎಂದು ಇವರು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ರೈತ ಆತ್ಮಹತ್ಯೆ ಪ್ರಕರಣಗಳು ಇವರ ಯೋಗ್ಯತೆಯನ್ನು ಸಾರಿ ಸಾರಿ ಸಾರಿ ಹೇಳುತ್ತಿವೆ ಎಂದು ಸಚಿವರು ಅಕ್ರೋಶ ವ್ಯಕ್ತಪಡಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.