ಚೆನ್ನೈ: ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ನಮ್ಮ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ಸರ್ಕಾರ ರಚಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಡಿಎಂಕೆ ಎಐಎಡಿಎಂಕೆ ಸೇರಿಕೊಂಡು ಸರ್ಕಾರ ರಚಿಸುತ್ತವೆ ಎಂಬ ಹೇಳಿಕೆಗೆ ಇಂಬು ನೀಡಿದಂತಾಗಿದೆ.
ಬಹುಮತ ಸಾಬೀತುಪಡಿಸಲು ವಿಜಯ್ ಅವರಿಗೆ ರಾಜ್ಯಪಾಲರು ಮೇ 10ರವರೆಗೆ ಸಮಯ ನೀಡಿದ್ದಾರೆ. ನಾವು ಅದುವರೆಗೆ ಕಾಯುತ್ತೇವೆ. ಒಂದು ವೇಳೆ ವಿಜಯ್ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ನಾವು ಆ ಬಗ್ಗೆ ನಮ್ಮ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಟಿವಿಕೆ 112 ಶಾಸಕರ ಬೆಂಬಲ ಹೊಂದಿದೆ. ಸರ್ಕಾರ ರಚಿಸಲು ಅವರು ಪ್ರಯತ್ನ ಮುಂದುವರೆಸಿದ್ದಾರೆ. ಅವರ ಪ್ರಯತ್ನದ ನಂತರ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದ ಅವರು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಕುರಿತು ಕೇಳಿದಾಗ ಸಧ್ಯಕ್ಕೆ ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಪಡೆದಿರುವ ಟಿವಿಕೆ ಮೊದಲ ಸ್ಥಾನದಲ್ಲಿದೆ. ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದು, ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗಿದೆ. 5 ಸೀಟುಗಳನ್ನು ಗೆದ್ದಿರುವ ಕಾಂಗ್ರೆಸ್ ಟಿವಿಕೆಗೆ ಬೆಂಬಲ ಕೊಡುವುದಾಗಿ ಘೋಷಿಸಿದೆ.
ವಿಸಿಕೆ ಮತ್ತು ಎಡಪಕ್ಷಗಳ ಬೆಂಬಲವನ್ನು ವಿಜಯ್ ಕೋರಿದ್ದಾರೆ. ಆದರೆ ಆ ಪಕ್ಷಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ.