ಬೆಂಗಳೂರು: ಸಾಮಾಜಿಕವಾದ ಜನಪರ ಯೋಜನೆಗಳ ಜೊತೆಯಲ್ಲಿ ಯಾವ ಪಕ್ಷದ ಸರ್ಕಾರ ಬಂದರೂ ಸಾರ್ವಕಾಲಿಕವಾಗಿ ನಿಲ್ಲುವಂತಹ ಕೆಲವು ಕಾಯ್ದೆಗಳ ಜಾರಿ ನನ್ನ ಆಡಳಿತಾವಧಿಯಲ್ಲಿ ನನಗೆ ಬಹಳ ತೃಪ್ತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳೀದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಸರಣಿ ಟ್ವೀಟ್ ಗಳ ಮೂಲಕ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಇವುಗಳಲ್ಲಿ ಐತಿಹಾಸಿಕವಾದ ‘ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಹಂಚಿಕೆ ಮತ್ತು ಪರಿಶಿಷ್ಟ ಪಂಗಡ ಉಪಹಂಚಿಕೆ ಕಾಯ್ದೆ (2013) ಪ್ರಮುಖವಾದುದು. ಇದರ ಪ್ರಕಾರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಇವರ ಜನಸಂಖ್ಯೆ ಪ್ರಮಾಣ ಶೇ,24.10ಕ್ಕೆ ಅನುಗುಣವಾಗಿ ಸಂಪನ್ಮೂಲವನ್ನು ಆಯವ್ಯಯದಲ್ಲಿ ಮೀಸಲಿಡಲಾಗುತ್ತಿದೆ.
ದಲಿತರ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದಾಗ ತೀವ್ರವಾದ ವಿರೋಧ ವ್ಯಕ್ತವಾದರೂ ಬಡ್ತಿ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿದ್ದು ನಮ್ಮ ಸರ್ಕಾರ. ಇಡೀ ದೇಶದಲ್ಲಿಯೇ ಮೊದಲ ಬಾರಿ ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರದ ಗುತ್ತಿಗೆ ಕಾಮಗಾರಿಗಳಲನ್ನು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಿಡುವ ಕಾಯ್ದೆಯನ್ನು ಜಾರಿಗೊಳಿಸಿದ್ದೆಔಎ ಎಂದಿದ್ದಾರೆ.
ಕೋಮುವಾದವು ಸಾಮಾಜಿಕ ಅನ್ಯಾಯದ ರಾಜಕೀಯ ಮಾದರಿ:
ಜನರಿಗೆ ತಲ್ವಾರು-ಕತ್ತಿ-ತ್ರಿಶೂಲ ಹಂಚುವುದು, ದೇವಸ್ಥಾನ, ಮಸೀದಿ, ಚರ್ಚ್ ಗಳ ಮೇಲೆ ದಾಳಿ ಮಾಡುವುದು, ಪ್ರಜೆಗಳ ಊಟದ ತಟ್ಟೆಯಲ್ಲಿ, ಮನೆಯ ಫ್ರಿಜ್ ಗಳಲ್ಲಿ ಆಹಾರ ಏನಿದೆ ಎಂದು ಇಣುಕಿ ನೋಡಿ ಹಲ್ಲೆ ನಡೆಸುವುದು, ಜಾತಿ-ಧರ್ಮದ ಹೆಸರಲ್ಲಿ ದ್ವೇಷ, ಅಸೂಯೆ, ಹಿಂಸೆಯನ್ನು ಹರಡುವುದು ಸಂವಿಧಾನ ವಿರೋಧಿ, ಕಾನೂನು ವಿರೋಧಿ ಮತ್ತು ಜನವಿರೋಧಿಯಾದುದು. ಇದು ‘’ಸಾಮಾಜಿಕ ಅನ್ಯಾಯ’’ದ ರಾಜಕೀಯ ಮಾದರಿ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದ್ವೇಷ ಹಂಚುವುದರಲ್ಲಿ ನಿರತರಾಗಿರುವ ಮತ್ತು ಜಾತಿ ಧರ್ಮಗಳ ನಡುವೆ ಕಲಹ ಹುಟ್ಟಿಸುತ್ತಿರುವ ಪಕ್ಷ-ಸಂಘಟನೆಗಳೆಲ್ಲ ಇಂದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.