ರಾಜ್ಯದಲ್ಲಿ ಬೆಟ್ಟಿಂಗ್ಗಳನ್ನು ತಡೆಯಬೇಕಿದ್ದ ಇಲಾಖೆಯ ಸಚಿವರೇ ಬೆಟ್ಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಕೇವಲ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಹೇಳಿಕೆ ನೀಡಿದ್ದ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಇದೀಗ FIR ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರ್ಟ್ ಆದೇಶ ಹೊರಡಿಸಿದೆ. ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿಯಾದ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್, ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದ್ದರು. ಗೃಹ ಸಚಿವರು ಹೇಳಿರುವ ಹೇಳಿಕೆ ಇದೀಗ ಅವರಿಗೆ ಮುಳುವಾಗಿದೆ.