ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ನಿಧನ ಹೊಂದಿದ್ದಾರೆ. 47 ವರ್ಷದ ಅವರು ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ದಿಲೀಪ್ ರಾಜ್ 2005ರಲ್ಲಿ ತೆರೆಗೆ ಬಂದ ‘ಬಾಯ್ಫ್ರೆಂಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ಶಿವ ಹೆಸರಿನ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಮಿಲನ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಹೋದರನಾಗಿ ನಟಿಸಿ ಅಪಾರ ಮೆಚ್ಚುಗೆ ಗಳಿಸಿದ್ದರು. ‘ಪರಿಚಯ’, ‘ನನ್ನೀ ಪಾರು’, ‘ಬಾರ್ಡರ್’, ಮತ್ತು ‘ಪಂಚಾಮೃತ’ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ನಂತರ ಅವರು ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ‘ಜನನಿ’ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ಅವರು ನಂತರ ನಿರ್ಮಾಪಕರಾದರು.
ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್ ಸಂಸ್ಥೆ ಸ್ಥಾಪಿಸಿ ಸಾಲು ಸಾಲಾಗಿ ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಇವರಿಗೆ ಅತಿದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಈ ಧಾರಾವಾಹಿಯ ‘ಅಭಿರಾಮ್ ಜಯಶಂಕರ್’ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿ ಇವರದ್ದೇ ನಿರ್ಮಾಣ.
ಸುಮಾರು ಎರಡು ದಶಕಗಳ ಕಾಲ ನಟನೆ ಮತ್ತು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ದಿಲೀಪ್ ನಿನ್ನೆಯವರೆಗೂ ಸಕ್ರಿಯರಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ಲವ್ ಮಾಕ್ಟೇಲ್ 3′ ಚಿತ್ರದಲ್ಲಿ ಅವರು ವಕೀಲರ ಪಾತ್ರ ಮಾಡಿದ್ದರು.