ಬೆಂಗಳೂರು: ಹಿಜಾಬ್ ಮತ್ತು ಜನಿವಾರ ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ವಿವಾದದ ಕಿಡಿ ಹೊತ್ತಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮವಸ್ತ್ರ ಕುರಿತಾದ 2022ರ ಆದೇಶ ಹಿಂಪಡೆದು ಹೊಸ ಆದೇಶ ಹೊರಡಿಸಲಾಗಿದೆ.
ಬಿಜೆಪಿ ವಿರೋಧ:
ಸರ್ಕಾರದ ಈ ನಿರ್ಧಾರಕ್ಕೆ ಪರ ವಿರೋಧ ಕೇಳಿ ಬಂದಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅವರು, ರೈತರ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ, ವ್ಯಾಪಕ ಭ್ರಷ್ಟಾಚಾರ, ಕುಸಿದ ಕಾನೂನು ಸುವ್ಯವಸ್ಥೆ, ಮೊದಲಾದ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು, ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ಸುನಿಲ್ ಕುಮಾರ್ ಕಿಡಿ ಕಾರಿದ್ದು, ಸರ್ಕಾರದ ಮುಸ್ಲಿಂ ಓಲೈಕೆ ನೀತಿ ಬಹಿರಂಗಗೊಂಡಿದೆ. ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯಾಗಿದೆ ಎಂದಿದ್ದಾರೆ.
ಶಿಕ್ಷಣದ ಇಸ್ಲಾಮೀಕರಣಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರಕ್ಕೆ ಮುಸ್ಲಿಮರ ಓಲೈಕೆಯೇ ಮುಖ್ಯವಾದಂತಿದೆ. ಈ ನಿರ್ಧಾರದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದೂ ಆರೋಪಿಸಿದ್ದಾರೆ.
ಮುಸ್ಲಿಂ ಮುಖಂಡ ರಜಾಕ್ ಪ್ರತಿಕ್ರಿಯೆ ನೀಡಿ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಏನಿದು ವಿವಾದ? ಆದೇಶ?:
ಕರ್ನಾಟಕ ಶಿಕ್ಷಣ ಕಾಯ್ದೆ, 1983 ರ ಅಡಿಯಲ್ಲಿ ಹೊರಡಿಸಲಾದ ಹೊಸ ಸರ್ಕಾರಿ ಆದೇಶದಲ್ಲಿ, ಮೇ 13 ರಂದು ರಾಜ್ಯವು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆ ವಸ್ತ್ರ ಅಥವಾ ಹಿಜಾಬ್ ಇತರೆ ಯಾವುದೇ ಸ್ವರೂಪದ ಸಾಂಪ್ರದಾಯಿಕ ಸಂಕೇತವನ್ನು ನಿಗದಿಪಡಿಸಲಾದ ಸಮವಸ್ತ್ರ ಜೊತೆಗೆ ಧರಿಸಬಹುದು. ಸಾಂಪ್ರದಾಯಿಕ ಮತ್ತು ಪದ್ಧತಿ ಆಧಾರಿತ ಸಂಕೇತ ಸಮವಸ್ತ್ರಕ್ಕೆ ಪೂರಕವಾಗಿರಬೇಕು. ಸಮವಸ್ತ್ರ ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು ಎಂದು ಹೇಳಲಾಗಿದೆ.
ಈ ಸಂಬಂಧ ವಿವರ ಒದಗಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯಾವುದೇ ವಿದ್ಯಾರ್ಥಿಯು ಅಂತಹ ಅನುಮತಿಸಲಾದ ಚಿಹ್ನೆಗಳನ್ನು ಧರಿಸಿದ್ದಕ್ಕಾಗಿ ತರಗತಿ ಕೊಠಡಿಗಳು, ಪರೀಕ್ಷಾ ಸಭಾಂಗಣಗಳು ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸಬಾರದು. ಯಾವುದೇ ವಿದ್ಯಾರ್ಥಿಯನ್ನು ಅಂತಹ ಚಿಹ್ನೆಗಳನ್ನು ಧರಿಸಲು ಅಥವಾ ತೆಗೆದುಹಾಕಲು ಒತ್ತಾಯಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಡುಪಿಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ 2022ರಲ್ಲಿ ಬಿಜೆಪಿ ಸರಕಾರ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಆದೇಶವನ್ನು ಹೊರಡಿಸಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಈ ಆದೇಶವನ್ನು ಹಿಂಪಡೆದಿದೆ.