2026-06-08 03:27:54

ಶಾಂಘೈ ಸಹಕಾರ ಸಂಸ್ಥೆ ಶೃಂಗಕ್ಕೆ ಭಾರತವನ್ನು ಪ್ರತಿನಿಧಿಸಿರುವ ಸಚಿವ ಹೆಚ್.ಡಿ. ಕುಮಾರಸ್ವಾಮಿ|Speed News Kannada

 ಶಾಂಘೈ ಸಹಕಾರ ಸಂಸ್ಥೆ ಶೃಂಗಕ್ಕೆ ಭಾರತವನ್ನು ಪ್ರತಿನಿಧಿಸಿರುವ ಸಚಿವ ಹೆಚ್.ಡಿ. ಕುಮಾರಸ್ವಾಮಿ|Speed News Kannada

ನವದೆಹಲಿ: ಬಿಷ್ಕೇಕ್‌: ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿರ್ಗಿಜ್ ಗಣರಾಜ್ಯದಲ್ಲಿ (ಕಿರ್ಗಿಸ್ತಾನ್)‌ ಬುಧವಾರದಿಂದ ಆರಂಭವಾಗಲಿರುವ ನಾಲ್ಕು ದಿನಗಳ ʼಶಾಂಘೈ ಸಹಕಾರ ಸಂಸ್ಥೆʼ (ಎಸ್‌ಸಿಒ)ಯ ವಿವಿಧ ರಾಷ್ಟ್ರಗಳ ಕೈಗಾರಿಕಾ ಸಚಿವರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆ ರಾಷ್ಟ್ರದ ರಾಜಧಾನಿ ಬಿಷ್ಕೇಕ್‌ ನಗರಕ್ಕೆ ಬಂದಿಳಿದಿದ್ದಾರೆ.

ʼಶಾಂಘೈ ಸಹಕಾರ ಸಂಸ್ಥೆʼ ಜಗತ್ತಿನ ಅತ್ಯಂತ ಪ್ರಭಾವಶಾಲಿ ಪ್ರಾದೇಶಿಕ ಗುಂಪುಗಳಲ್ಲಿ ಒಂದಾಗಿದ್ದು, ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತವನ್ನು ಸಚಿವ ಕುಮಾರಸ್ವಾಮಿ ಅವರು ಶೃಂಗಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ವಿದೇಶಾಂಗ ಖಾತೆ ಮಾಜಿ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಅವರ ನಂತರ ಎಸ್‌ಸಿಒ ಶೃಂಗಸಭೆಯ ಸಚಿವರ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಎರಡನೇ ಪ್ರಮುಖ ಕನ್ನಡಿಗ ನಾಯಕರಾಗಿದ್ದಾರೆ.

ಯುರೇಷಿಯಾ (ಏಷ್ಯಾ-ಯುರೋಪ್) ನಾದ್ಯಂತ ವಿಸ್ತರಿಸುತ್ತಿರುವ ಭಾರತದ ಆರ್ಥಿಕ ಮತ್ತು ಕಾರ್ಯತಂತ್ರದ ಹೆಜ್ಜೆಗುರುತನ್ನು ಗಮನದಲ್ಲಿಟ್ಟುಕೊಂಡು ಸಚಿವರ ಈ ಭೇಟಿ ವಿಶೇಷ ಮಹತ್ವ ಪಡೆದುಕೊಂಡಿದೆ. ಕೈಗಾರಿಕಾ ಸಚಿವರ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಚಿವ ಕುಮಾರಸ್ವಾಮಿ ಅವರು ಎಸ್‌ಸಿಒ ಸದಸ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಬೆಳವಣಿಗೆ, ತಾಂತ್ರಿಕ ಸಹಯೋಗ, ಸುಸ್ಥಿರ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳಿಗಾಗಿ ರಾಷ್ಟ್ರದ ದೃಷ್ಟಿಕೋನವನ್ನು ಪ್ರತಿಪಾದಿಸುವರು.

ಶಾಂಘೈ ಸಹಕಾರ ಸಂಸ್ಥೆ ವಿಶ್ವದ ಅತಿದೊಡ್ಡ ಬಹುಪಕ್ಷೀಯ ಗುಂಪುಗಳಲ್ಲಿ ಒಂದಾಗಿದ್ದು, ಯುರೇಷಿಯಾದಾದ್ಯಂತ ಹತ್ತು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ ಮತ್ತು ಜಾಗತಿಕ ಜನಸಂಖ್ಯೆ ಮತ್ತು ಆರ್ಥಿಕತೆಯ ಗಣನೀಯ ಪಾಲು ಹೊಂದಿದೆ. 2017ರಲ್ಲಿ ಎಸ್‌ʼಸಿಒ (SCO) ನ ಪೂರ್ಣ ಸದಸ್ಯತ್ವ ಪಡೆದ ಭಾರತವು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಿದೆ.

ಭಾರತಕ್ಕೆ, ಎಸ್‌ʼಸಿಒ ವೇದಿಕೆಯು ಮಧ್ಯ ಏಷ್ಯಾದ ದೇಶಗಳೊಂದಿಗೆ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು, ಆರ್ಥಿಕ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ಕಾರ್ಯತಂತ್ರದ ಪ್ರಮುಖ ಸಂಪರ್ಕಗಳನ್ನು ಉತ್ತೇಜಿಸಲು ಒಂದು ಅನನ್ಯ ಅವಕಾಶ ಒದಿಗಿಸಿದೆ. ಮಧ್ಯ ಏಷ್ಯಾದ ಹೃದಯ ಭಾಗದಲ್ಲಿರುವ ಮತ್ತು ಚೀನ ಮತ್ತು ವಿಶಾಲ ಮಧ್ಯ ಏಷ್ಯಾ ಪ್ರದೇಶದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಿರ್ಗಿಜ್ ಗಣರಾಜ್ಯವು ಭವಿಷ್ಯದ ಕೈಗಾರಿಕಾ ಸಹಕಾರದ ಕುರಿತು ಚರ್ಚೆಗಳಿಗೆ ಸೂಕ್ತ ಸ್ಥಳವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ:

ಸಚಿವರ ಶೃಂಗವು ಕೈಗಾರಿಕಾ ಸಹಕಾರವನ್ನು ಬಲಪಡಿಸುವುದು, ತಾಂತ್ರಿಕ ಪಾಲುದಾರಿಕೆಗಳನ್ನು ಉತ್ತೇಜಿಸುವುದು, ನಾವೀನ್ಯತೆ-ನೇತೃತ್ವದ ಬೆಳವಣಿಗೆಯನ್ನು ಹೆಚ್ಚಿಸುವುದು ಹಾಗೂ ಸದಸ್ಯ ರಾಷ್ಟ್ರಗಳ ನಡುವೆ ಹೂಡಿಕೆ ಮತ್ತು ಉತ್ಪಾದನಾ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸುವ ನಿರೀಕ್ಷೆ ಇದೆ. ಕೈಗಾರಿಕಾ ಯೋಜನೆಗಳನ್ನು ಸುಗಮಗೊಳಿಸುವ, ಕೈಗಾರಿಕಾ ವಲಯಗಳ ನಡುವಿನ ಸಹಕಾರವನ್ನು ಸುಧಾರಿಸುವ ಮತ್ತು ಸುಸ್ಥಿರ ಮತ್ತು ಸಂಪನ್ಮೂಲ-ಸಮರ್ಥ ಉತ್ಪಾದನಾ ಪದ್ಧತಿಗಳನ್ನು ಉತ್ತೇಜಿಸುವ ಗುರಿ ಹೊಂದಿರುವ ಕಾರ್ಯವಿಧಾನಗಳನ್ನು ಸಹ ಶೃಂಗಸಭೆಯ ಚರ್ಚೆಗಳು ಒಳಗೊಂಡಿರುತ್ತವೆ.

ಈ ಚರ್ಚೆಗಳ ಸಮಯದಲ್ಲಿ ಸಚಿವ ಕುಮಾರಸ್ವಾಮಿ ಅವರು; ಭಾರತದ ಬೆಳೆಯುತ್ತಿರುವ ಕೈಗಾರಿಕಾ ಸಾಮರ್ಥ್ಯಗಳು ಮತ್ತು ಜಾಗತಿಕ ಉತ್ಪಾದನೆ ಮತ್ತು ಹೂಡಿಕೆಗೆ ಆದ್ಯತೆಯ ತಾಣವಾಗಿ ಭಾರತವು ಹೊರ ಹೊಮ್ಮುವುದನ್ನು ಎಸ್‌ʼಸಿಒ ಸದಸ್ಯ ರಾಷ್ಟ್ರಗಳ ಮುಂದೆ ಆಳವಾಗಿ ಪ್ರತಿಪಾದಿಸಲಿದ್ದಾರೆ. ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು, ಮಾಲಿನ್ಯಮುಕ್ತ ಚಲನಶೀಲತೆ ವೇಗಗೊಳಿಸುವುದು ಮತ್ತು ಮುಂದುವರಿದ ಕೈಗಾರಿಕಾ ಪೂರಕ ವ್ಯವಸ್ಥೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಪರಿವರ್ತನಾ ಉಪಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯವು ಮುಂಚೂಣಿಯಲ್ಲಿದೆ. ಪಿಎಂ ಇ-ಡ್ರೈವ್‌ (PM E-DRIVE) ಹಾಗೂ ಇನ್ನಿತರ ಪ್ರಮುಖ ಕಾರ್ಯಕ್ರಮಗಳು ಭವಿಷ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಹಸಿರು ತಂತ್ರಜ್ಞಾನಗಳಿಗೆ ಭಾರತದ ಬದ್ಧತೆಗೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.

ಎಸ್‌ʼಸಿಒ ಸದಸ್ಯ ರಾಷ್ಟ್ರಗಳ ನಡುವೆ ತಂತ್ರಜ್ಞಾನ ವಿನಿಮಯ, ಕೈಗಾರಿಕಾ ಪಾರ್ಕ್‌ʼಗಳ ಸ್ಥಾಪನೆ, ನಾವೀನ್ಯತೆ ಪಾಲುದಾರಿಕೆ ಮತ್ತು ಬಲವಾದ ಉತ್ಪಾದನಾ ಸಂಪರ್ಕಗಳ ಮೂಲಕ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆಯೂ ಶೃಂಗಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ. ಈ ಚರ್ಚೆಗಳು ಅತ್ಯುತ್ತಮ ಪೂರೈಕೆ ಸರಪಳಿಗಳನ್ನು ರೂಪಿಸುವುದು, ನಾವೀನ್ಯತೆಗೆ ಉತ್ತೇಜನ ನೀಡುವುದು ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕೈಗಾರಿಕಾ ಪಾಲುದಾರಿಕೆಗಳನ್ನು ವಿಸ್ತರಿಸುವ ಭಾರತದ ವಿಶಾಲ ದೃಷ್ಟಿಕೋನದೊಂದಿಗೆ ನಿಕಟವಾಗಿ ಹೊಂದಿಕೆ ಆಗುತ್ತವೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದ್ದಾರೆ.

ಮಧ್ಯ ಏಷ್ಯಾ ಮತ್ತು ಯುರೇಷಿಯನ್ ಪ್ರದೇಶದೊಂದಿಗೆ ಭಾರತದ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಢವಾದ ಒತ್ತು ನೀಡುವುದನ್ನು ಈ ಭೇಟಿ ಪ್ರತಿಬಿಂಬಿಸುತ್ತದೆ. ಭಾರತವು ಎಸ್‌ʼಸಿಒ ಚೌಕಟ್ಟಿನೊಳಗೆ ಹೆಚ್ಚು ಸಕ್ರಿಯ ಪಾತ್ರ ವಹಿಸಿದೆ ಹಾಗೂ ಸಂವಾದ, ಆರ್ಥಿಕ ಸಹಕಾರ ಮತ್ತು ಜನಕೇಂದ್ರಿತ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿದೆ. ಭಾರತದ ಕೊಡುಗೆಗಳು ಪ್ರಾದೇಶಿಕ ಸ್ಥಿರತೆ, ಸಮೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಗೆ ಬದ್ಧವಾಗಿರುವ ಜವಾಬ್ದಾರಿಯುತ ಮತ್ತು ರಚನಾತ್ಮಕ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸಿವೆ.

ಸಚಿವರ ಈ ಭೇಟಿಯು ಸಚಿವರ ನಿಯಮಿತ ಭೇಟಿಯನ್ನು ಮೀರಿದ್ದಾಗಿದ್ದು, ಇದು ಉತ್ಪಾದನಾ ಶಕ್ತಿಯಾಗಿ ಭಾರತದ ವಿಶ್ವಾಸ, ಬಹುಪಕ್ಷೀಯ ಸಹಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬಲವಾದ ಕೈಗಾರಿಕಾ ಪಾಲುದಾರಿಕೆಗಳನ್ನು ನಿರ್ಮಿಸುವ ಇಚ್ಛಾಶಕ್ತಿಯನ್ನು ಪ್ರತಿನಿಧಿಸುತ್ತದೆ. ಅತಿ ಮುಖ್ಯವಾಗಿ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ರಾಜ್ಯದ ಮತ್ತೊಬ್ಬ ನಾಯಕರು ಭಾರತದ ದನಿಯನ್ನು ಅತ್ಯಂತ ಪ್ರಭಾವಿ ವೇದಿಕೆಯಾದ ʼಶಾಂಘೈ ಸಹಕಾರ ಸಂಸ್ಥೆʼ (ಎಸ್‌ಸಿಒ) ಯಲ್ಲಿ ಮೊಳಗಿಸಲಿದ್ದಾರೆ.
 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.