2026-06-06 11:29:08

ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭಾಗಿ; ದ್ವಿಪಕ್ಷೀಯ ಮಾತುಕತೆ|Speed News Kannada

ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭಾಗಿ; ದ್ವಿಪಕ್ಷೀಯ ಮಾತುಕತೆ|Speed News Kannada

ಇಸ್ಸಿಕ್-ಕುಲ್, ಕಿರ್ಗಿಜ್ ಗಣರಾಜ್ಯ: ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಿರ್ಗಿಜ್ ಗಣರಾಜ್ಯದ ಇಸ್ಸಿಕ್-ಕುಲ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ಸದಸ್ಯ ರಾಷ್ಟ್ರಗಳ ಕೈಗಾರಿಕಾ ಸಚಿವರ 4ನೇ ಶೃಂಗಸಭೆಯಲ್ಲಿ ಪಾಲ್ಗೊಂಡರು.

ಸಚಿವರ ಸಭೆಯಲ್ಲಿ ಅವರು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು, ಪರಿಣಾಮಕಾರಿ ಪೂರೈಕೆ ಸರಪಳಿಗಳನ್ನು ಬಲಪಡಿಸಲು, ಹೆಚ್ಚೆಚ್ಚು ಉತ್ಪಾದನೆ ಉತ್ತೇಜಿಸಲು ಮತ್ತು ಶಾಂಘೈ ಸಹಕಾರ ಸಂಸ್ಥೆಯ (SCO) ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಭಾರತದ ಬದ್ಧತೆ ಬಗ್ಗೆ ಒತ್ತಿ ಹೇಳಿದರು.

ಶೃಂಗಸಭೆಯಲ್ಲಿ ಜಂಟಿ ಸಂವಹನ ಮತ್ತು ಮುಂದಿನ ಸಭೆ, ಚರ್ಚೆಗಳ ಬಗ್ಗೆ ಸದಸ್ಯ ರಾಷ್ಟ್ರಗಳ ಸಚಿವರ ವಿಸ್ತೃತ ಚರ್ಚೆ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ಕೈಗಾರಿಕಾ ಸಹಯೋಗವನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಮೂಹಿಕ ಸಂಕಲ್ಪದ ಅಗತ್ಯವನ್ನು ಪ್ರತಿಪಾದಿಸಿದರು.

ಸಚಿವರ ಶೃಂಗಸಭೆಯ ಹೊರತಾಗಿ ಸಚಿವ ಕುಮಾರಸ್ವಾಮಿ ಅವರು; ಕೈಗಾರಿಕೆ, ಉತ್ಪಾದನೆ, ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಅನ್ವೇಷಿಸಲು ಸದಸ್ಯ ರಾಷ್ಟ್ರಗಳ ತಮ್ಮ ಸಹವರ್ತಿಗಳೊಂದಿಗೆ ಹಲವಾರು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು.

ಸಚಿವರು ಇರಾನ್ ಗಣರಾಜ್ಯದ ಕೈಗಾರಿಕೆ, ಗಣಿ ಮತ್ತು ವ್ಯಾಪಾರ ಸಚಿವರಾದ ಸಯ್ಯದ್ ಮೊಹಮ್ಮದ್ ಅಟಾಬೆಕ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರಲ್ಲದೆ, ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಕೈಗಾರಿಕಾ ಪಾಲುದಾರಿಕೆಯನ್ನು ಹೆಚ್ಚಿಸುವ ಮತ್ತು ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಅವಕಾಶಗಳ ಕುರಿತು ವ್ಯಾಪಕವಾಗಿ ಸಮಾಲೋಚಿಸಿದರು.

ಹಾಗೆಯೇ ತಜಿಕಿಸ್ತಾನ್ ಗಣರಾಜ್ಯದ ಕೈಗಾರಿಕೆ ಮತ್ತು ನವೀನ ತಂತ್ರಜ್ಞಾನಗಳ ಖಾತೆ ಮಂತ್ರಿಗಳಾದ ಶೇರಾಲಿ ಕಬೀರ್ ಅವರೊಂದಿಗೆ ಕೈಗಾರಿಕಾ ಸಂಬಂಧಗಳನ್ನು ಸದೃಢಗೊಳಿಸುವುದು, ತಂತ್ರಜ್ಞಾನ ಸಹಕಾರ ಮತ್ತು ಉಭಯ ದೇಶಗಳ ನಡುವಿನ ಗಾಢ ಸಹಯೋಗಕ್ಕಾಗಿ ಹೊಸ ಅವಕಾಶಗಳನ್ನು ಅನ್ವೇಷಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

ಇದಲ್ಲದೆ, ಉಜ್ಬೇಕಿಸ್ತಾನ್ ಗಣರಾಜ್ಯದ ಹೂಡಿಕೆ, ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಸಚಿವರಾದ ಲಾಜಿಜ್ ಕುದ್ರಾಟೋವ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಕೈಗಾರಿಕಾ ಖಾತೆ ಸಚಿವರು; ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ವೃದ್ಧಿಸುವುದು, ಕೈಗಾರಿಕಾ ಹೂಡಿಕೆಗಳಿಗೆ ಉತ್ತೇಜನ ಮತ್ತು ಪ್ರಮುಖ ಉತ್ಪಾದನಾ ವಲಯಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರ ಬಲವಾದ ಒತ್ತಾಸೆಯಂತೆ ಪ್ರಾದೇಶಿಕ ಸಂಪರ್ಕ, ಸುಸ್ಥಿರ ಬೆಳವಣಿಗೆ ಮತ್ತು ಪರಸ್ಪರ ಸಹಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ, ಶಾಂಘೈ ಸಹಕಾರ ಸಂಸ್ಥೆ (SCO) ಚೌಕಟ್ಟಿನೊಳಗೆ ಕೈಗಾರಿಕಾಭಿವೃದ್ಧಿ ಮತ್ತು ಆರ್ಥಿಕ ಸಹಕಾರವನ್ನು ಮುನ್ನಡೆಸುವಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಬೆಳೆಯುತ್ತಿರುವ ರೀತಿ, ಜಾಗತಿಕ ಮಟ್ಟದಲ್ಲಿ ಭಾರತ ನಿರ್ವಹಿಸುತ್ತಿರುವ ಪಾತ್ರದ ದ್ವಿಪಕ್ಷೀಯ ಸಭೆಗಳಲ್ಲಿ ಸಚಿವರು ಮುಖ್ಯವಾಗಿ ಉಲ್ಲೇಖಿಸಿದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.