ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಯುವಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಯುವಜನತೆ ಕಳೆದ ಎರಡೂವರೆ ವರ್ಷದಿಂದ ಕಣ್ಣೀರು ಹಾಕುತ್ತಿದ್ದಾರೆ. ಪ್ರತಿಭಟನೆ- ಹೋರಾಟ ಮಾಡುತ್ತಿದ್ದಾರೆ; ಇದ್ಯಾವುದನ್ನೂ ಲೆಕ್ಕಿಸದೇ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲೂ ಇದೇ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ಮಾಡಿದರೆ ಲಾಠಿ ಚಾರ್ಜ್ ಮಾಡಿದ್ದರು. ಆಗಲೂ ಸರಕಾರ ಎಚ್ಚತ್ತುಕೊಳ್ಳಲಿಲ್ಲ ಎಂದು ದೂರಿದರು. ಮುಖ್ಯಮಂತ್ರಿಗಳ ಜೊತೆ ಭೇಟಿಗೆ ಸಮಯ ನಿಗದಿಪಡಿಸಲು ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು ಎಂದು ತಿಳಿಸಿದರು.
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರು ಕುರ್ಚಿ ಕಾಳಗದಲ್ಲಿ ಬ್ಯುಸಿ ಆಗಿದ್ದಾರೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಕಸಿದುಕೊಳ್ಳಲು ಮುಂದಾಗಿದ್ದಾರೆಯೇ ವಿನಾ ಈ ಯುವಜನತೆಯ ಸಮಸ್ಯೆ ಆಲಿಸಲು ಇವರಿಗೆ ಸಮಯ ಸಿಗುತ್ತಿಲ್ಲ ಎಂದು ಟೀಕಿಸಿದರು. ನನ್ನನ್ನು ವಿದ್ಯಾರ್ಥಿಗಳ ಒಕ್ಕೂಟದವರು ಬಂದು ಭೇಟಿ ಮಾಡಿದ್ದರು. 2 ಲಕ್ಷ 85 ಸಾವಿರ ಹುದ್ದೆಗಳು ಇವತ್ತಿಗೂ ಖಾಲಿ ಬಿದ್ದಿವೆ. ಕಾಂಗ್ರೆಸ್ ಸರಕಾರಕ್ಕೆ ಅವುಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮೀಸಲಾತಿ ಗೊಂದಲ ಬಳಸಿಕೊಂಡು ರಾಜ್ಯ ಹೈಕೋರ್ಟ್‍ನಲ್ಲಿ ಸರಿಯಾಗಿ ವಾದ ಮಂಡಿಸದೇ ಕಾಲಹರಣ ಮಾಡಿಕೊಂಡು ಕಾಂಗ್ರೆಸ್ ಸರಕಾರ ಕುಳಿತಿದೆ. ಯುವಜನತೆಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಮಾಡುವ ಇಚ್ಛಾಶಕ್ತಿ ಈ ಸರಕಾರದಿಂದ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಿದ್ಯಾರ್ಥಿಗಳ ಒಕ್ಕೂಟ ಬೆಂಗಳೂರು, ಕಲಬುರ್ಗಿ, ಧಾರವಾಡದಲ್ಲೂ ಪ್ರತಿಭಟನೆ ಮಾಡಿದ್ದರು. ಇವತ್ತು ಮತ್ತೊಮ್ಮೆ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ನೇಮಕಾತಿಯನ್ನೂ ಮಾಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ:
ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು. ಜೊತೆಗೆ ಕೆಪಿಎಸ್ಸಿ ವ್ಯವಸ್ಥೆ ಸುಧಾರಣೆ ಮಾಡಬೇಕು. ನಿಮ್ಮ ಸರಕಾರ ಇದ್ದಾಗ ಏನು ಮಾಡಿದ್ದೀರಿ ಎಂಬಂಥ ಮಾತುಗಳನ್ನು ಬದಿಗಿಟ್ಟು ಯುವಜನತೆಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಯುವಜನರ ವಯೋಮಿತಿ ಮೀರುತ್ತಿದೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.
ಶಿವಾಜಿ ಜಯಂತಿ ಸಂದರ್ಭದಲ್ಲಿ ಕಲ್ಲು ತೂರಿದ ದೇಶದ್ರೋಹಿಗಳ ವರ್ತನೆ ತಮಗೆಲ್ಲ ತಿಳಿದಿದೆ. ದಕ್ಷಿಣ ಕನ್ನಡ, ಯಲ್ಲಾಪುರ, ಶಿವಮೊಗ್ಗದಲ್ಲಿ ಸೇರಿ ಅಹಿತಕರ ಘಟನೆಗಳು ನಡೆದಿವೆ. ಕೆಲವೆಡೆ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ. ಯಲ್ಲಾಪುರದಲ್ಲಿ ದಲಿತ ಮಹಿಳೆಯ ಬರ್ಬರ ಹತ್ಯೆ ನಡೆಸಲಾಗಿದೆ. ಇವನ್ನು ಗಮನಿಸಿದರೆ ಗೃಹ ಸಚಿವರು ರಾಜ್ಯದಲ್ಲಿ ಇದ್ದಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವಂತಾಗಿದೆ ಎಂದು ನುಡಿದರು.