ನವದೆಹಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ 11 ನೇ ದಿನಕ್ಕೆ ಕಾಲಿಟ್ಟಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಈ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಪ್ರತೀ ಬ್ಯಾರಲ್ ದರವು ಶೇ 23.63ರಷ್ಟು ಹೆಚ್ಚಳವಾಗಿದ್ದು, ಪ್ರತೀ ಬ್ಯಾರಲ್ ದರವು 114 ಡಾಲರ್ ಗೆ ಹೆಚ್ಚಳವಾಗಿದೆ.
ಇಸ್ರೇಲ್ ಮೇಲೆ ತೀವ್ರ ದಾಳಿ ನಡೆಸುತ್ತಿರುವ ಇರಾನ್, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದೆ. ಇದರಿಂದ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಇದರ ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.
ಜಗತ್ತಿನ ವಿವಿಧ ದೇಶಗಳಿಗೆ ‘ಹಾರ್ಮುಜ್’ ಜಲಸಂಧಿ ಮೂಲಕವೇ ತೈಲ ಪೂರೈಕೆಯಾಗುತ್ತದೆ. ಅದರಲ್ಲೂ ಸೌದಿ ಅರೇಬಿಯಾ, ಇರಾಕ್, ಯುಎಇಯಿಂದ ಭಾರತಕ್ಕೆ ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ಪೂರೈಕೆಯಾಗುತ್ತಿದೆ.
ಭಾರತ ಶೇ.80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಜಗತ್ತಿನಲ್ಲಿ ಆಮದು ಮಾಡಿಕೊಳ್ಳುವ ಮೂರನೇ ದೊಡ್ಡ ರಾಷ್ಟ್ರವಾಗಿದೆ. ಅದರಲ್ಲೂ ಶೇ.50ರಷ್ಟು ಕಚ್ಚಾತೈಲ ಹಾರ್ಮುಜ್ ಜಲಸಂಧಿ ಮೂಲಕವೇ ಆಮದಾಗುತ್ತದೆ. ಸಧ್ಯ ತೈಲ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸಲಾಗುತ್ತದೆ ಎಂದು ಕಾದುನೋಡಬೇಕಿದೆ.