2026-06-08 01:23:23

Grihalakshmi | ಗೃಹಲಕ್ಷ್ಮಿ ಪ್ರತಿ ಮನೆಯ ಯಜಮಾನಿಗೆ ಇದುವರೆಗೆ 52000 ರೂ ಪಾವತಿ ದಿನೇಶ್‌ ಗೂಳಿಗೌಡ | Speed News Kannada

Grihalakshmi | ಗೃಹಲಕ್ಷ್ಮಿ ಪ್ರತಿ ಮನೆಯ ಯಜಮಾನಿಗೆ ಇದುವರೆಗೆ 52000 ರೂ ಪಾವತಿ ದಿನೇಶ್‌ ಗೂಳಿಗೌಡ | Speed News Kannada

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯ 26ನೇ ಕಂತಿನ ತಲಾ 2000 ರೂ. ಹಣ ಫಲಾನುಭವಿಗಳ ಖಾತೆಗೆ ಯಶಸ್ವಿಯಾಗಿ ಜಮೆಯಾಗಿದ್ದು, ಇದರೊಂದಿಗೆ ಪ್ರತಿ ಮನೆಯ ಯಜಮಾನಿಗೆ ಈವರೆಗೆ ಒಟ್ಟು 52,000 ರೂ. ಪಾವತಿಯಾದಂತಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರವು ತನ್ನ ಐದೂ ಗ್ಯಾರಂಟಿ ಯೋಜನೆಗಳ ಮೂಲಕ ಬರೋಬ್ಬರಿ 1 ಲಕ್ಷದ 20 ಸಾವಿರದ 433 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೇರ ಮತ್ತು ಪಾರದರ್ಶಕವಾಗಿ ಜನರ ಖಾತೆಗೆ ವರ್ಗಾಯಿಸುವ ಮೂಲಕ ನುಡಿದಂತೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1,24,10,629 ಮಹಿಳೆಯರು ನೋಂದಣಿಯಾಗಿದ್ದಾರೆ. ಈ ಯೋಜನೆಗಾಗಿ ಸರ್ಕಾರವು ಇದುವರೆಗೆ ಒಟ್ಟು 62,345.34 ಕೋಟಿ ರೂ. ವೆಚ್ಚ ಮಾಡಿದೆ. 26 ಕಂತುಗಳ ಹಣ ಯಶಸ್ವಿಯಾಗಿ ಪಾವತಿಯಾಗಿದ್ದು, 27ನೇ ಕಂತಿನ ಅನುದಾನವನ್ನು ಸಹ ಈಗಾಗಲೇ ಖಜಾನೆಯಿಂದ ಬಿಡುಗಡೆಗೊಳಿಸಲಾಗಿದೆ. 
"ಪ್ರತಿ ತಿಂಗಳು 2,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿರುವುದರಿಂದ, ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳು ಕೇವಲ ಹಣದ ಸಹಾಯವಲ್ಲ, ಗೌರವದ ಭರವಸೆ. ಪಕ್ಷಭೇದವಿಲ್ಲದೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳು ಈ ಯೋಜನೆಗಳು ನಿಲ್ಲುತ್ತವೆ ಎಂದು ಅಸೂಯೆಯಿಂದ ಅಪಪ್ರಚಾರ ಮಾಡುತ್ತಿವೆ. ಆದರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಿರುವಂತೆ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ನಿರಂತರವಾಗಿ ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
5 ಗ್ಯಾರಂಟಿ ಯೋಜನೆಗಳ ಸಮಗ್ರ ಪ್ರಗತಿ: 
ಗೃಹಲಕ್ಷ್ಮಿ ಯೋಜನೆ: 1,24,10,629 ಮಹಿಳಾ ಫಲಾನುಭವಿಗಳಿಗೆ ತಲಾ 2000 ರೂ. ನಂತೆ ಈವರೆಗೆ ಒಟ್ಟು ₹62,345.34 ಕೋಟಿ ವೆಚ್ಚ.
ಗೃಹಜ್ಯೋತಿ ಯೋಜನೆ: 1,65,65,000 ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, ಈವರೆಗೆ ಒಟ್ಟು ₹22,839 ಕೋಟಿ ವೆಚ್ಚ.
ಶಕ್ತಿ ಯೋಜನೆ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, ಈವರೆಗೆ 679.20 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ₹17,606.49 ಕೋಟಿ ವೆಚ್ಚ.
ಅನ್ನಭಾಗ್ಯ ಯೋಜನೆ: ಬಡ ಕುಟುಂಬಗಳಿಗೆ ಉಚಿತ ಅಕ್ಕಿ/ಹಣ ವಿತರಿಸುವ ಈ ಯೋಜನೆಗೆ ಒಟ್ಟು ₹16,000 ಕೋಟಿ ವ್ಯಯ.

ಯುವನಿಧಿ ಯೋಜನೆ: 3,08,267 ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದುವರೆಗೆ ಒಟ್ಟು ₹915 ಕೋಟಿ ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.