ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರು ದಿನವೇ ಡಿಕೆ ಶಿವಕುಮಾರ್ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಯಲ್ಲಿ ಹಾಜರಿರಬೇಕು ಎಂದು ಹೊಸ ಸರ್ಕಾರ ಸೂಚನೆ ನೀಡಿದೆ.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಂದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಇನ್ನು ಮುಂದೆ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರುವ ಉದ್ದೇಶದೊಂದಿಗೆ ಬಯೋಮೆಟ್ರಿಕ್ ವ್ಯವಸ್ಥೆ ಬದಲಾಗಿ ಕೃತಕ ಬುದ್ಧಿಮತ್ತೆ(AI) ಮತ್ತು ಜಿಪಿಎಸ್ ಆಧರಿತ ಹಾಜರಾತಿಯನ್ನ ಕಡ್ಡಾಯಗೊಳಿಸಿದೆ.
ಆದೇಶದಲ್ಲಿ ಏನಿದೆ?
ಜೂನ್ 4 ರಂದು ನಡೆದ ಸಭೆಯಲ್ಲಿ, ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಸ್ತುತ ಇ-ಆಡಳಿತ ಇಲಾಖೆಯು ಸಿದ್ಧಪಡಿಸಿರುವ `ಕರ್ತವ್ಯ App’ ನಲ್ಲಿ ಈಗಾಗಲೇ HRMS ನಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿಗಳು ಹಾಗೂ ವರ್ಗದ ಮಾಹಿತಿಯನ್ನ ನೋಂದಾಯಿಸಲಾಗಿದೆ. ಆದ್ರೆ ಬಳಷ್ಟು ಅಧಿಕಾರಿ/ಸಿಬ್ಬಂದಿಗಳು ಈ ತಂತ್ರಾಂಶವನ್ನ (App) ನಿರಂತರವಾಗಿ ಬಳಸುತ್ತಿಲ್ಲದಿರುವುದು ಕಂಡುಬಂದಿದೆ. ಆದ್ದರಿಂದ ಈ ನಿರ್ದೇಶನ ತಪ್ಪದೇ ಪಾಲಿಸಲು ಸೂಚಿಸಲಾಗಿದೆ.