2026-03-07 12:56:12

GBA Election Discord In BJP-JDS Alliance? | ಜಿಬಿಎ ಚುನಾವಣೆ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಅಪಸ್ವರ? | Speed News Kannada

GBA Election Discord In BJP-JDS Alliance? | ಜಿಬಿಎ ಚುನಾವಣೆ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಅಪಸ್ವರ? | Speed News Kannada

ಜಿಬಿಎ ಚುನಾವಣೆಯನ್ನು ಜೂನ್ ತಿಂಗಳ ಅಂತ್ಯದ ಒಳಗೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.  2015ರಲ್ಲಿ ಕೊನೆಯ ಬಾರಿ ಬಿಬಿಎಂಪಿ ಎಂದು ಇದ್ದಾಗ ಚುನಾವಣೆ ನಡೆದಿತ್ತು. ಇದೀಗ 11 ವರ್ಷಗಳ ನಂತರ ಬಿಬಿಎಂಪಿ ಮರುನಾಮಾಂಕಿತ ʼಗ್ರೇಟರ್‌ ಬೆಂಗಳೂರು ಪ್ರಾಧಿಕಾರʼದಡಿಯಲ್ಲಿ ಬರುವ ಎಲ್ಲಾ ಐದು ಪಾಲಿಕೆಗಳಿಗೂ ಚುನಾವಣೆ ನಡೆಸಲು ಸಿದ್ಧತೆ ಆರಂಭವಾಗಿದೆ. ಈ ಬೆನ್ನಲ್ಲೇ ಇದೀಗ ಬಿಜೆಪಿ ಹಾಗೂ ಜೆಡಿಎಸ್‌ ನಲ್ಲಿ ಹೊಸ ಅಪಸ್ವರ ಕೇಳಿಬಂದಿದೆ. 

ಜಿಬಿಎ ಚುನಾವಣೆಗೆ ಇನ್ನೂ ಕೆಲವು ತಿಂಗಳುಗಳಷ್ಟೇ ಬಾಕಿ ಇರುವ ಹೊತ್ತಿನಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಿದ್ದತೆಯಲ್ಲಿ ತೊಡಗಿವೆ. ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷಗಳು ಮೈತ್ರಿಯಲ್ಲಿ ಮುಂದುವರಿಯುತ್ತವೆಯೋ ಅಥವಾ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ ಮಾಡುತ್ತಾ ಅನ್ನೋ ಹಲವು ಚರ್ಚೆಗಳು ಈಗಾಗಲೇ ನಡೆದಿವೆ. ಆದರೆ ಈ ಬಗ್ಗೆ ಜೆಡಿಎಸ್‌ ವರಿಷ್ಠರು ಸ್ಪಷ್ಟನೆ ನೀಡಿದ್ದು ಎನ್‌ಡಿಎ ಮೈತ್ರಿಯಲ್ಲೇ ಜಿಬಿಎ ಚುನಾವಣೆ ಎದುರಿಸ್ತೇವೆ ಎಂದಿದ್ದಾರೆ. ಆದರೆ, 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಇರುವ 369 ವಾರ್ಡ್‌ಗಳ ಪೈಕಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ  120 ವಾರ್ಡ್ ಗಳನ್ನು ಬಿಜೆಪಿ ನೀಡಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡ ಪಟ್ಟು ಹಿಡಿದಿದ್ದಾರೆ. 

ಹೌದು, ಜೆಡಿಎಸ್ ಪಕ್ಷ ಪ್ರಬಲವಾಗಿರುವ ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ಯಶವಂತಪುರ, ಚಾಮರಾಜಪೇಟೆ ಸೇರಿದಂತೆ ಕೆಲವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 120 ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇಂಗಿತವನ್ನು ಜೆಡಿಎಸ್ ವರಿಷ್ಠ ದೇವೇಗೌಡ ವ್ಯಕ್ತಪಡಿಸಿದ್ದಾರೆ.  ಆದರೆ, ಇದೀಗ ದೇವೇಗೌಡರ ಹೇಳಿಕೆಗೆ, ಬೆಂಗಳೂರಿನ ಬಿಜೆಪಿ ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ  28 ವಿಧಾನಸಭಾ ಕ್ಷೇತ್ರದ ಪೈಕಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಶಾಸಕರುಗಳೂ ಇಲ್ಲ. ಜೆಡಿಎಸ್ ಬೇಡಿಕೆಯಂತೆ , ವಾರ್ಡ್ ಗಳನ್ನು ಜೆಡಿಎಸ್ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟರೇ, ಆ ವಾರ್ಡ್ ಕಾಂಗ್ರೆಸ್ ಪಾಲಾಗುತ್ತೆ. ಜೊತೆಗೆ ಬಿಜೆಪಿಯ ಆಸ್ತಿತ್ವಕ್ಕೂ ಕೊಡಲಿಪೆಟ್ಟು ಬೀಳುತ್ತೆ ಎಂಬ ಆತಂಕ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಇದೆ.  

ಹೀಗಾಗಿ  ಜಿಬಿಎ ಚುನಾವಣೆ,  BJP ನಾಯಕರಿಗೆ ಹೊಸ ತಲೆನೋವುತಂದಿದೆ.  ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 16 ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ ಶಾಸಕರುಗಳೇ ಇದ್ದಾರೆ. 120 ವಾರ್ಡ್ ಗಳನ್ನು JDSಗೆ ಬಿಟ್ಟು ಕೊಟ್ರೆ, ಆ ವಾರ್ಡ್‌ಗಳಲ್ಲಿ ಒಂದುವೇಳೆ ಸೋಲು ಎದುರಾದರೆ ಎಂಬ ಆತಂಕ ಬಿಜೆಪಿ ನಾಯಕರಿಗಿದೆ.  ಮುಂದೆ 2028ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಶಾಸಕರಿಗೆ, ಹಾಗೂ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಹೀಗಾಗಿ, ಹೆಚ್ಚಿನ ವಾರ್ಡ್ ಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಶಾಸಕರು ಹಿಂದೇಟು ಹಾಕುತ್ತಿದ್ದಾರೆ.  

ಆದರೆ, 120 ವಾರ್ಡ್ ಗಳಲ್ಲಿ  ಜೆಡಿಎಸ್  ಸ್ಪರ್ಧಿಸಲು ಮಾಜಿ ಶಾಸಕರು, ಮಾಜಿ ಪಾಲಿಕೆ ಸದಸ್ಯರು ಈಗಾಗಲೇ ಭರದ ಸಿದ್ದತೆ ನಡೆಸುತ್ತಿದ್ದಾರೆ. ಹೀಗಾಗಿ ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ವಾರ್ಡ್ ಹಂಚಿಕೆಯ ಬಿಕ್ಕಟ್ಟು ಎದುರಾಗಿದೆ.    
ಇದು ಹೀಗೆ ಮುಂದುವರೆದರೆ, ಬಿಜೆಪಿ- ಜೆಡಿಎಸ್ ನಡುವಿನ ಮೈತ್ರಿಗೆ ಮತ್ತಷ್ಟು ಪೆಟ್ಟು ಬೀಳಲಿದೆ. ಹೀಗಾಗಿ ಜಿಬಿಎ ಚುನಾವಣೆಯಲ್ಲಿ ಈ ಮೈತ್ರಿ ಮುಂದುವರೆಯುತ್ತಾ ಅಥವಾ ಈ ಸಮಸ್ಯೆಗಳನ್ನ ಬಗೆಹರಿಸಿಕೊಂಡು ಒಗ್ಗಟ್ಟಿನ ಬಲಪ್ರದರ್ಶನ ನಡೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.