ಬೆಂಗಳೂರು: ಪಾರಂಪರಿಕ ಕಟ್ಟಡಗಳ ಸೌಂದರ್ಯೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಂದಿಗೆ ನೇರವಾಗಿ ಮಾತನಾಡಿದರು.
ನಂತರ ಅವರು ಅಧಿಕಾರಿಗಳಿಗೆ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
ಪಾಲಿಕೆ ವ್ಯಾಪ್ತಿಯ ಪಾರಂಪರಿಕ ಕಟ್ಟಡಗಳ ಪಟ್ಟಿ ಸಿದ್ಧಪಡಿಸಿ ಸೌಂದರ್ಯೀಕರಣಕ್ಕೆ ಸಮಗ್ರ ಆಕ್ಷನ್ ಪ್ಲಾನ್ ರೂಪಿಸಬೇಕು. ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ಅನಧಿಕೃತ LED ಜಾಹೀರಾತುಗಳ ಪರಿಶೀಲನೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ತಿಳಿಸಿದರು.
ಮೇಲ್ಸೇತುವೆಗಳ ಕೆಳಭಾಗಗಳನ್ನು ಗುರುತಿಸಿ ಸೌಂದರ್ಯೀಕರಣಕ್ಕೆ ಅಭಿವೃದ್ಧಿ ಯೋಜನೆ ಸಿದ್ಧಪಡಿಸಬೇಕು. ಮಳೆಗಾಲಕ್ಕೂ ಮುನ್ನ ನೀರುಗಾಲುವೆಗಳಲ್ಲಿ ಹೂಳೆತ್ತಿ, ಸರಾಗ ನೀರಿನ ಹರಿವು ಖಚಿತಪಡಿಸಬೇಕು. ನಾಗರಿಕರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
500ಕ್ಕೂ ಹೆಚ್ಚು ಪೇಯಿಂಗ್ ಗೆಸ್ಟ್ ಪರಿಶೀಲನೆ ನಡೆಸಿ ರೂ. 3 ಲಕ್ಷ ದಂಡ ಮತ್ತು 8 ಪಿಜಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದರು. ಸಭೆಯಲ್ಲಿ ಕಂದಾಯ ಅಪರ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.