ಮಂಗಳೂರು: ಚೆನ್ನೈನಿಂದ ಮಂಗಳೂರಿಗೆ ರೈಲಿನ ಮೂಲಕ ಭಾರಿ ಪ್ರಮಾಣದ ನಿಷೇಧಿತ ಹೈಡೋ ಗಾಂಜಾವನ್ನು ಸಾಗಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮಂಗಳೂರು ಪೊಲೀಸರು ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಸುಹಾನ (21) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಂತಿಮ ವರ್ಷದ BCA ವಿದ್ಯಾರ್ಥಿನಿಯಾಗಿದ್ದಾಳೆ. ಮಂಗಳವಾರ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿನಿಯಿಂದ ಸುಮಾರು 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡೋ ವಿಡ್ ಗಾಂಜಾ ಎಂಬ ಅತೀ ದುಬಾರಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸುಹಾನ ಈ ಮಾದಕ ವಸ್ತುವನ್ನು ಚೆನ್ನೈನಿಂದ ಮಂಗಳೂರಿಗೆ ತರಿಸಿಕೊಂಡಿದ್ದಳು. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಗ್ರಾಹಕರಿಗೆ ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದಳು ಎನ್ನಲಾಗಿದೆ.
ಕೇವಲ 21 ವರ್ಷದ ಈ ವಿದ್ಯಾರ್ಥಿನಿ ಈಗಾಗಲೇ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಈಕೆಯ ಮೇಲೆ ಈ ಹಿಂದೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಂಗಳೂರು ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡ ಮಾದಕ ವಸ್ತು ಜಾಲಗಳು ಹೆಚ್ಚುತ್ತಿದ್ದು ಪೊಲೀಸರು ಜಾಗೃತಿ ಮತ್ತು ನಿಗಾವನ್ನು ತೀವ್ರಗೊಳಿಸಿದ್ದಾರೆ.