ರಾಯಚೂರು: ಮನೆಯಲ್ಲಿದ್ದ ಫ್ರಿಜ್ ಒಂದು ಏಕಾಏಕಿ ಸ್ಪೋಟಗೊಂಡಿದ್ದು, ಇಡೀ ಮನೆ ಹೊತ್ತಿ ಉರಿದ ಶಾಕಿಂಗ್ ಘಟನೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ರಾಜನಾಯ್ ಎಂಬುವರ ಮನೆಯಲ್ಲಿ ಫ್ರಿಜ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿದೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಜನಾಯ್ ಕುಟುಂಬ ನಿನ್ನೆ ಸಿರಗುಪ್ಪಗೆ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಫ್ರಿಜ್ ಏಕಾಏಕಿ ಸ್ಪೋಟಗೊಂಡಿದೆ. ಇದರಿಂದಾಗಿ ಮನೆಯ ಗೋಡೆ ಹಾಗೂ ಛಾವಣಿಯೂ ಕುಸಿದಿದೆ. ಜೊತೆಗೆ ಇಡೀ ಮನೆಗೆ ಬೆಂಕಿ ಆವರಿಸಿದೆ.
ಮನೆಯಲ್ಲಿದ್ದ 2.5 ಲಕ್ಷ ರೂ. ನಗದು ಸೆರಿದಂತೆ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಫ್ರಿಜ್ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.