ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿರುವ ಉಚಿತ ಸಲಹೆಗಳು ಅವರ ಸರ್ಕಾರದ ವೈಫಲ್ಯಗಳಿಗೆ ಸಾಕ್ಷ್ಯಗಳಾಗಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ಪ್ರಧಾನಿಯವರು ರಾಜಿ ಮಾಡಿಕೊಂಡು ದೇಶವನ್ನು ಮುನ್ನಡೆಸಲು ಅಸಮರ್ಥರಾಗಿದ್ದಾರೆ. ಚಿನ್ನ ಖರೀದಿಸಬೇಡಿ, ವಿದೇಶಗಳಿಗೆ ಪ್ರಯಾಣ ಬೆಳೆಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ, ರಸಗೊಬ್ಬರ ಹಾಗೂ ಅಡುಗೆ ಎಣ್ಣೆ ಮಿತವಾಗಿ ಬಳಕೆ ಮಾಡಿ, ಮೆಟ್ರೊದಲ್ಲಿ ಪ್ರಯಾಣಿಸಿ ಮತ್ತು ವರ್ಕ್ ಫ್ರಂ ಹೋಮ್ ಅನುಸಿರಿಸಿ ಎಂದು ಕರೆ ನೀಡಿದ್ದಾರೆ. ಇಂತಹ ಸಲಹೆಗಳು ಅವರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಗಳಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ಮೋದಿ ಅವರು ಅಧಿಕಾರಕ್ಕೆ ಬಂದ 12 ವರ್ಷಗಳಲ್ಲಿ ದೇಶವನ್ನು ಎಂತಹ ದುಸ್ಥಿತಿಗೆ ತಂದಿದ್ದಾರೆ ಎಂದರೆ ಸಾರ್ವಜನಿಕರಿಗೆ ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂಬುದನ್ನು ಹೇಳುವ ಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ಆಪಾದಿಸಿದ್ದಾರೆ.
ಪ್ರತಿ ಬಾರಿಯೂ ತಮ್ಮ ಜವಬ್ದಾರಿಯನ್ನು ದೇಶದ ಜನರ ಮೇಲೆ ಹೊರಿಸುತ್ತಾರೆ. ಅಲ್ಲದೆ ಸ್ವತಃ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ. ರಾಜಿ ಮಾಡಿಕೊಂಡ ಪ್ರಧಾನಿಗೆ ಇನ್ನು ಮುಂದೆ ದೇಶವನ್ನು ಮುನ್ನಡೆಸುವುದು ಅಸಾಧ್ಯವಾಗಿದೆ ಎಂದು ಕಿಡಿಕಾರಿದ್ದಾರೆ.