2026-07-27 02:12:02

FRAUD | ಗೃಹ ಸಾಲದ ಆಮಿಷ ಮೊಬೈಲ್ ಸಿಮ್ ಬದಲಿಸಿದರೂ 48.5 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಯುವತಿ! | SNK

FRAUD | ಗೃಹ ಸಾಲದ ಆಮಿಷ ಮೊಬೈಲ್ ಸಿಮ್ ಬದಲಿಸಿದರೂ 48.5 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಯುವತಿ! | SNK

ಬೆಂಗಳೂರು: ಸ್ವಂತ ಮನೆ ಕೊಳ್ಳುವ ಕನಸಿನಲ್ಲಿದ್ದ ನಗರದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 48.5 ಲಕ್ಷ ರೂ. ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಹಲಸೂರಿನಲ್ಲಿ ನಡೆದಿದೆ. 28 ವರ್ಷದ ಯುವತಿಯೊಬ್ಬರು ಗೃಹ ಸಾಲಕ್ಕಾಗಿ (Home Loan) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಸೈಬರ್ ಖದೀಮರ ತಂತ್ರಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಯುವತಿಯು ವೆಬ್‌ಸೈಟ್‌ ಒಂದರ ಮೂಲಕ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಾಲ ನೀಡುವ ನೆಪದಲ್ಲಿ ವಂಚಕರು ಕಳುಹಿಸಿದ್ದ ಲಿಂಕ್ ಮೂಲಕ ತಮ್ಮ ಪಾನ್ ಕಾರ್ಡ್, ಆಧಾರ್, ಕಚೇರಿಯ ವಿವರಗಳು ಹಾಗೂ ಸೆಲ್ಫಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಅವರು ಆ ನಂತರ ಸಾಲದ ಪ್ರಕ್ರಿಯೆಯನ್ನು ಮುಂದುವರಿಸಿರಲಿಲ್ಲ.

ಇದಾಗಿ ಕೆಲವು ತಿಂಗಳ ನಂತರ, ಮಾರ್ಚ್ ತಿಂಗಳಿನಿಂದ ಯುವತಿಗೆ ವಿವಿಧ ಅಂತರರಾಷ್ಟ್ರೀಯ ವಾಟ್ಸಾಪ್ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬರಲು ಪ್ರಾರಂಭವಾಗಿದ್ದವು. ವಿವಿಧ ಲೋನ್ ಆಯಪ್‌ಗಳಿಂದ ಸಾಲ ಪಡೆಯಲಾಗಿದೆ ಎಂದು ಸುಳ್ಳು ಹೇಳಿ ಹಣ ಪಾವತಿಸುವಂತೆ ವಂಚಕರು ಪೀಡಿಸಲು ಶುರುಮಾಡಿದ್ದರು. ಅಷ್ಟಕ್ಕೇ ನಿಲ್ಲದೆ, ಯುವತಿಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದರು. ಈ ಬೆದರಿಕೆಗೆ ಹೆದರಿದ ಯುವತಿ, ಹಂತ ಹಂತವಾಗಿ ಸುಮಾರು 3.5 ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು.

ವಂಚನೆಯ ಸುಳಿವು ಸಿಗುತ್ತಿದ್ದಂತೆ ಎಚ್ಚೆತ್ತ ಯುವತಿ, ತಮ್ಮ ಮೊಬೈಲ್‌ನಲ್ಲಿದ್ದ ಅನುಮಾನಾಸ್ಪದ ಆಯಪ್‌ಗಳನ್ನು ಅಳಿಸಿ, ಫೋನ್ ಫಾರ್ಮ್ಯಾಟ್ ಮಾಡಿದ್ದರು. ಮೇ ತಿಂಗಳಲ್ಲಿ ಹೊಸ ಮೊಬೈಲ್ ಹಾಗೂ ಹೊಸ ಸಿಮ್ ಕಾರ್ಡ್ ಪಡೆಯುವ ಮೂಲಕ ವಂಚಕರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಜುಲೈ ತಿಂಗಳಲ್ಲಿ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅವರಿಗೆ ದೊಡ್ಡ ಆಘಾತ ಕಾಯುತ್ತಿತ್ತು. ತಮ್ಮ ಅನುಮತಿಯಿಲ್ಲದೆ, ಯಾವುದೇ ಒಟಿಪಿ ಅಥವಾ ಎಸ್‌ಎಂಎಸ್ ಬರದೆಯೇ ಖಾತೆಯಿಂದ ಹಂತ ಹಂತವಾಗಿ ಸುಮಾರು 45 ಲಕ್ಷ ರೂ. ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಕೃತ್ಯದಿಂದ ಕಂಗಾಲಾದ ಯುವತಿ ತಕ್ಷಣವೇ ಬ್ಯಾಂಕ್‌ಗೆ ತೆರಳಿ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು 1930 ಸೈಬರ್ ಸಹಾಯವಾಣಿ ಹಾಗೂ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರೂ, ಒಟಿಪಿ ಇಲ್ಲದೆ ಹಣ ಹೇಗೆ ವರ್ಗಾವಣೆಯಾಯಿತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಯುವತಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.