ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ದೇಶದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. ರಾಜಕೀಯ ರಂಗದ ಹಿರಿಯ ಚೇತನದ ಒಡನಾಡಿಯಾಗಿದ್ದ ಚೆನ್ನಮ್ಮ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ. ದೇವೇಗೌಡರು ಹಾಗೂ ಅವರ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿರುವ ಪ್ರಧಾನಿ, ಚೆನ್ನಮ್ಮ ಅವರ ವಿನಯಶೀಲತೆ ಮತ್ತು ಸಮಾಜ ಸೇವೆಯ ಮೇಲಿದ್ದ ಬದ್ಧತೆಯನ್ನು ವಿಶೇಷವಾಗಿ ಸ್ಮರಿಸಿದ್ದಾರೆ. ಮತ್ತೊಂದೆಡೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಸಹ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಚೆನ್ನಮ್ಮ ಅವರ ನಿಧನದ ಸುದ್ದಿ ತೀವ್ರ ನೋವು ತಂದಿದೆ ಎಂದಿದ್ದಾರೆ. ಸಮಾಜ ಸೇವೆಯ ಬಗ್ಗೆ ಅವರಿಗಿದ್ದ ಉತ್ಸಾಹ ಹಾಗೂ ವಿನಮ್ರತೆಯನ್ನು ಕೊಂಡಾಡಿರುವ ರಾಹುಲ್, ಈ ಕಷ್ಟದ ಸಮಯದಲ್ಲಿ ದೇವೇಗೌಡರ ಇಡೀ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.