ಭಾರತದ ಈಕ್ವಿಟಿಗಳಿಂದ ಮಾರ್ಚ್ ತಿಂಗಳಲ್ಲಿ 12.3 ಬಿಲಿಯನ್ ಡಾಲರ್ನಷ್ಟು ಎಫ್ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್ನಲ್ಲಿ ಈವರೆಗೂ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್ಗಳು ಉಳಿದಿದ್ದು, ಮತ್ತಷ್ಟು ಸಾವಿರಾರು ಕೋಟಿ ರೂ ಎಫ್ಪಿಐಗಳ (FPI- Foreign Portfolio Investors) ಹೊರಹರಿವು ಆಗುವ ನಿರೀಕ್ಷೆ ಇದೆ. ಮಾರ್ಚ್ ತಿಂಗಳಲ್ಲಿ ಎಫ್ಪಿಐಗಳು ಸತತವಾಗಿ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದ ಟ್ರೆಂಡ್ ಇತ್ತು. ಈಕ್ವಿಟಿ ಕ್ಯಾಷ್ ಮಾರ್ಕೆಟ್ನಲ್ಲಿ ಮಾರ್ಚ್ 27ರವರೆಗೆ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಮಾರಿದ ಈಕ್ವಿಟಿಗಳ ಮೌಲ್ಯ 1,13,380 ಕೋಟಿ ರೂ ಎನ್ನಲಾಗಿದೆ. ಇರಾನ್ ಯುದ್ಧದ ಪರಿಣಾಮವು ಮಾರ್ಚ್ ತಿಂಗಳಲ್ಲಿ ಈಕ್ವಿಟಿ ಮಾರುಕಟ್ಟೆ ಮೇಲೆ ತೀವ್ರವಾಗಿ ಬಿದ್ದಿದೆ. ಹಾಗೆಯೇ, ಕಳೆದ 18 ತಿಂಗಳಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯ ಸಾಧನೆಯು ಇತರ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ದುರ್ಬಲ ಸಾಧನೆ ತೋರಿದೆ.