2026-07-23 09:08:39

Fly 91 has another landing problem | ಫ್ಲೈ 91 ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್ ಸಮಸ್ಯೆ | Speed news kannada

Fly 91 has another landing problem | ಫ್ಲೈ 91 ವಿಮಾನಕ್ಕೆ ಮತ್ತೆ ಲ್ಯಾಂಡಿಂಗ್ ಸಮಸ್ಯೆ | Speed news kannada

ಕಳೆದ ಒಂದು ವಾರದ ಅವಧಿಯಲ್ಲಿ ಮೂರನೇ ಬಾರಿಗೆ ಫ್ಲೈ 91 ಸಂಸ್ಥೆಯ ವಿಮಾನಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಮಧ್ಯಾಹ್ನ 3.13ಕ್ಕೆ ಹೈದರಾಬಾದ್‌ನಿಂದ ಹೊರಟಿದ್ದ ಜಿಒಎ 3401 ವಿಮಾನವು ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ವಿಮಾನವು ಆಗಸದಲ್ಲೇ ಸುಮಾರು 40 ನಿಮಿಷಗಳ ಕಾಲ ಸುತ್ತು ಹೊಡೆದಿದ್ದು, ಅಂತಿಮವಾಗಿ ಸಂಜೆ 5.09ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಫ್ಲೈ 91 ವಿಮಾನ ಲ್ಯಾಂಡಿಂಗ್‌ ಸಮಸ್ಯೆ ಇದೇ ಮೊದಲಲ್ಲ, ಫೆಬ್ರವರಿ 19ರಂದು ಕೂಡ ಇದೇ ರೀತಿಯ ಸಮಸ್ಯೆಯಾಗಿತ್ತು.  ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಫ್ಲೈ 91 ವಿಮಾನವು ವೇಗ ನಿಯಂತ್ರಣ ಕಳೆದುಕೊಂಡಿದ್ದು, ನಾಲ್ಕು ಗಂಟೆಗಳ ಕಾಲ ಆಗಸದಲ್ಲೇ ತಿರುಗಾಡಿ ನಂತರ ಬೆಂಗಳೂರಿನಲ್ಲಿ ಲ್ಯಾಂಡ್ ಮಾಡಲಾಗಿತ್ತು. ಈ ವೇಳೆ ತಾಂತ್ರಿಕ ದೋಷವೇ ಕಾರಣ ಎನ್ನುವ ಆರೋಪಗಳು ಕೇಳಿಬಂದಿದ್ದವು. ಘಟನೆಯ ಬಗ್ಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪ್ರಯಾಣಿಕರ ಕುಟುಂಬಸ್ಥರು ಏರ್‌ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೂ ಮುನ್ನ ಫೆಬ್ರವರಿ 21ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಮತ್ತೊಂದು ವಿಮಾನಕ್ಕೂ ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. ಸಂಜೆ 7 ಗಂಟೆಗೆ ಹೊರಟಿದ್ದ ವಿಮಾನವು ರಾತ್ರಿ 8.15ಕ್ಕೆ ತಲುಪಬೇಕಾಗಿದ್ದರೂ, ಒಂದು ಗಂಟೆ ಕಾಲ ಆಕಾಶದಲ್ಲಿ ಸುತ್ತಾಟ ನಡೆಸಿ ರಾತ್ರಿ 9.15ಕ್ಕೆ ಮಾತ್ರ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.

ಪ್ರತಿ ಬಾರಿ ಹವಾಮಾನ ವೈಪರೀತ್ಯವೇ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಒಂದೇ ಸಂಸ್ಥೆಯ ವಿಮಾನಗಳಿಗೆ ಪದೇಪದೇ ಸಮಸ್ಯೆಗಳು ಎದುರಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಯಾಣಿಕರು ಹಾಗೂ ಸಾರ್ವಜನಿಕರು ವಿಮಾನ ಸಂಸ್ಥೆಯ ಕಾರ್ಯಪದ್ಧತಿ ಬಗ್ಗೆ ಪ್ರಶ್ನೆ ಎತ್ತಿದ್ದು, ಭದ್ರತಾ ಕ್ರಮಗಳನ್ನು ಬಲಪಡಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಗಳ ಹಿನ್ನೆಲೆ ವಿಮಾನಯಾನ ಸುರಕ್ಷತೆ ಕುರಿತು ಚರ್ಚೆಗಳು ಮತ್ತೆ ಪ್ರಾರಂಭವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.