2026-06-25 02:00:25

ಯುಪಿಎಸ್‌ಸಿ ಸುಳ್ಳು ಜಾಹೀರಾತು: ಕೋಚಿಂಗ್ ಸೆಂಟರ್ ಗಳಿಗೆ ದಂಡ: ಸಚಿವ ಪ್ರಲ್ಹಾದ ಜೋಶಿ| Speed News Kannada

ಯುಪಿಎಸ್‌ಸಿ ಸುಳ್ಳು ಜಾಹೀರಾತು: ಕೋಚಿಂಗ್ ಸೆಂಟರ್ ಗಳಿಗೆ ದಂಡ: ಸಚಿವ ಪ್ರಲ್ಹಾದ ಜೋಶಿ| Speed News Kannada

ನವದೆಹಲಿ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ-2023ರ ಫಲಿತಾಂಶ  ಬಗ್ಗೆ ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಖಾಸಗಿ ಕೋಚಿಂಗ್ ಸಂಸ್ಥೆಯೊಂದಕ್ಕೆ 'ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ' (CCPA) ರೂ. 7 ಲಕ್ಷ ದಂಡ ವಿಧಿಸಿದೆ.

ಯುಪಿಎಸ್‌ಸಿ ಅಭ್ಯರ್ಥಿಗಳ ಕೋರ್ಸ್‌ಗಳ ಸ್ವರೂಪದ ಬಗ್ಗೆ ತರಬೇತಿ ಸಂಸ್ಥೆ ವಾಸ್ತವ ಮರೆಮಾಚಿ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿ ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘಿಸಿದ ಕಾರಣ CCPA  ವಾಜಿರಾಮ್ ಮತ್ತು ರವಿ ಐಎಎಸ್ ಕೋಚಿಂಗ್ ಸೆಂಟರ್ ಗೆ ಈ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಈ ಕೋಚಿಂಗ್ ಸಂಸ್ಥೆ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2023ರ ಯಶಸ್ವಿ ಅಭ್ಯರ್ಥಿಗಳ ಹೆಸರು, ಪೋಟೋ ಬಳಸಿಕೊಂಡಿದ್ದಲ್ಲದೆ, ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್‌ಗಳ ಮಾಹಿತಿ ಮರೆಮಾಚಿರುವುದು ಗೊತ್ತಾಗಿದೆ.

ಹೇಗೆ ವಂಚನೆ:

UPSC CSE 2023ರ ಘೋಷಣೆ ನಂತರ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ (www.vajiramandravi.com) ನಲ್ಲಿ "ಟಾಪ್ 10ರಲ್ಲಿ 8 ಶ್ರೇಯಾಂಕ ಪಡೆದವರು ವಾಜಿರಾಮ್ ಮತ್ತು ರವಿಯವರಿಂದ ಬಂದವರು" "ಟಾಪ್ 50ರಲ್ಲಿ 37 ರ್ಯಾಂಕ್ ಹೊಂದಿರುವವರು ವಾಜಿರಾಮ್ ಮತ್ತು ರವಿಯವರಿಂದ ಬಂದವರು" ಎಂದು ಪ್ರಕಟಿಸಲಾಗಿತ್ತು. ಆದರೆ, ವಾಸ್ತವವಾಗಿ ಪ್ರತಿ ವರ್ಷ, UPSC ನಾಗರಿಕ ಸೇವಾ ಪರೀಕ್ಷೆ ಮೂಲಕ ಆಯ್ಕೆಯಾಗುವ ಅಧಿಕಾರಿಗಳಲ್ಲಿ  ಶೇ.30ಕ್ಕಿಂತ ಹೆಚ್ಚು ಜನರು ವಾಜಿರಾಮ್ ಮತ್ತು ರವಿ ಅವರ ವಿದ್ಯಾರ್ಥಿಗಳಾಗಿದ್ದರು. ಅಲ್ಲದೆ, 37 ಶ್ರೇಯಾಂಕಿತರಲ್ಲಿ 29 ಅಭ್ಯರ್ಥಿಗಳು ಮಾತ್ರ ಉಚಿತ ಸಂದರ್ಶನ ಮಾರ್ಗದರ್ಶನಕ್ಕೆ ದಾಖಲಾಗಿದ್ದರು. ಆದರೆ, ಈ ಸಂಸ್ಥೆಗಳು ಆಕ್ಷೇಪಾರ್ಹ ಜಾಹೀರಾತು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸೆಕ್ಷನ್ 2(28) (iv) ಅಡಿಯಲ್ಲಿ "ದಾರಿ ತಪ್ಪಿಸುವ ಜಾಹೀರಾತು" ಎಂದು CCPA ಅಭಿಪ್ರಾಯಪಟ್ಟಿದೆ, ಇದು ಪ್ರಮುಖ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದನ್ನು ನಿಷೇಧಿಸುತ್ತದೆ. ಈ ನಡವಳಿಕೆಯು ಗ್ರಾಹಕರಿಗೆ ಮಾಹಿತಿ ಪಡೆಯುವ ಹಕ್ಕನ್ನು ನೀಡುವ ಕಾಯಿದೆಯ ಸೆಕ್ಷನ್ 2(9)ರ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.

60ಕ್ಕೂ ಹೆಚ್ಚು ಸಂಸ್ಥೆಗಳಿಗೆ ನೋಟಿಸ್:

ದಾರಿ ತಪ್ಪಿಸುವ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಗಾಗಿ  ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈವರೆಗೆ 60ಕ್ಕೂ ಹೆಚ್ಚು ತರಬೇತಿ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದು, UPSC ನಾಗರಿಕ ಸೇವಾ ಪರೀಕ್ಷೆ (CSE), IIT-JEE, NEET, RBI ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ತರಬೇತಿ ಸಂಸ್ಥೆಗಳ ಮೇಲೆ ರೂ.1.46 ಕೋಟಿಗೂ ಹೆಚ್ಚು ದಂಡ ವಿಧಿಸಿದೆ.

ಪರಿಶೀಲನೆಗೆ ಸೂಚಿಸಿದ್ದ ಸಚಿವ ಜೋಶಿ: ಕೋಚಿಂಗ್ ಸೆಂಟರ್ ಗಳ ಅನ್ಯಾಯದ ವಿರುದ್ಧ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆ ಸಚಿವ ಪ್ರಲ್ಹಾದ ಜೋಶಿ ಅವರು ಪರಿಶೀಲನೆಗೆ ಸೂಚಿಸಿದ್ದರು. ಅಭ್ಯರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಸಚಿವರು ಅಗತ್ಯ ಮಾರ್ಗದರ್ಶನ ಸಹ ನೀಡಿದ್ದರು. ಅದರಂತೆ ಇಲಾಖೆ ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ ಪರಿಶೀಲನೆ ಕೈಗೆತ್ತಿಕೊಂಡ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA), ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್ ಎಲ್‌ಎಲ್‌ಪಿ ಲೋಪ ಮನಗಂಡು ದಂಡ ವಿಧಿಸಿ ಆದೇಶ ಹೊರಡಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.