ಅಮೆರಿಕಾ-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಪಶ್ಚಿಮ ಇರಾಕ್‌ನಲ್ಲಿ ಅಮೆರಿಕಾದ ಸೈನಿಕ ಇಂಧನ ತುಂಬುವ ವಿಮಾನ ಪತನಗೊಂಡಿರುವ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕಾದ ವಿಮಾನ ಕಾರ್ಯಾಚರಣೆ ವೇಳೆ ಕುಸಿದಿದ್ದು, ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಅಮೆರಿಕಾದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆ 'ಫ್ರೆಂಡ್ಲಿ ಏರ್‌ಸ್ಪೇಸ್'ನಲ್ಲಿ ನಡೆದಿದೆ ಮತ್ತು ಪ್ರಾಥಮಿಕ ತನಿಖೆಯಲ್ಲಿ ಶತ್ರು ದಾಳಿ ಅಥವಾ ಫ್ರೆಂಡ್ಲಿ ಫೈರ್ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಮತ್ತೊಂದು ವಿಮಾನ ಹಾನಿಗೊಳಗಾದರೂ ಸುರಕ್ಷಿತವಾಗಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಇರಾನ್ ಪರ ಸಂಘಟನೆಗಳು ಕ್ಷಿಪಣಿ ದಾಳಿಯಿಂದ ಅಮೆರಿಕಾದ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿವೆ. ಆದರೆ ಈ ಹೇಳಿಕೆಗೆ ಅಮೆರಿಕಾ ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲ. ವಿಮಾನದಲ್ಲಿ ಐವರು ಅಥವಾ ಹೆಚ್ಚಿನ ಸಿಬ್ಬಂದಿ ಇದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸಿಬ್ಬಂದಿಗಳ ಸ್ಥಿತಿಯ ಕುರಿತು ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಘಟನೆಯ ನಂತರ ಅಮೆರಿಕಾದ ಸೇನೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಪತನದ ನಿಖರ ಕಾರಣ ತಿಳಿಯಲು ಸಂಪೂರ್ಣ ತನಿಖೆ ಆರಂಭಿಸಲಾಗಿದೆ.