ಬೆಂಗಳೂರು: ಅಧಿಕಾರ ಹಸ್ತಾಂತರ ಕುರಿತು ಹಾವು ಏಣಿಯಾಟ ನಡೆಯುತ್ತಿರುವ ಬೆನ್ನಲ್ಲೇ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಸಂಪುಟ ಪನಾರಚಿಸಬೇಕು ಮತ್ತು ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದು ಹೈಕಮಾಂಡ್ ಮೊರೆ ಹೋಗಿದ್ದಾರೆ.
ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದು, ಸಚಿವ ಸಂಪುಟ ಪುನರ್‌ರಚನೆಯಲ್ಲಿ ಹೊಸಬರನ್ನು ಪರಿಗಣಿಸಬೇಕು. ಕನಿಷ್ಠ ಐವರು ಹೊಸ ಶಾಸಕರಿಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಮಂಡ್ಯ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದೆ. ಈ ಮನವಿ ಪತ್ರಕ್ಕೆ ಶಾಸಕ ಪ್ರದೀಪ್ ಈಶ್ವರ್, ಭೀಮಸೇನ ಚಿಮ್ಮನಕಟ್ಟಿ, ಪೊನ್ನಣ್ಣ, ಇಕ್ಬಾಲ್ ಹುಸೇನ್, ಎನ್.ಟಿ. ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್. ಶ್ರೀನಿವಾಸ, ದರ್ಶನ್ ಧ್ರುವ ನಾರಾಯಣ ಸೇರಿದಂತೆ ಹಲವರು ಸಹಿ ಹಾಕಿದ್ದಾರೆ.
ಮುಂದಿನ ಸಚಿವ ಸಂಪುಟ ಪುನರ್‌ರಚಿಸುವಾಗ ಹೊಸದಾಗಿ ಆಯ್ಕೆಯಾದ ಶಾಸಕರನ್ನು ಸಂಪುಟಕ್ಕೆ ಸೇರಿಸಬೇಕು. ಒಟ್ಟು 38 ಮಂದಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಗೆದ್ದ ಶಾಸಕರಿದ್ದೇವೆ. ಜನರು ನಮ್ಮನ್ನು ಹೊಸ ನಿರೀಕ್ಷೆಗಳೊಂದಿಗೆ ಆಯ್ಕೆ ಮಾಡಿದ್ದಾರೆ. ಆ ನಿರೀಕ್ಷೆಗಳಿಗೆ ತಕ್ಕಂತೆ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ” ಎಂದು ತಿಳಿಸಿದ್ದಾರೆ. ಸಂಪುಟದಲಿ 34 ಸಚಿವರಿಗೆ ಅವಕಾಶ ಇದೆ. ಇವರಲ್ಲಿ ಕನಿಷ್ಠ 5 ಶಾಸಕರಿಗೆ ಅವಕಾಶ ಕಲ್ಪಿಸಬೇಕು ಎಂದೂ ವಿವರಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಮೊದಲ ಬಾರಿ ಗೆದ್ದ ಶಾಸಕರು ಮುಖ್ಯಮಂತ್ರಿ ಅಥವಾ ಸಚಿವರಾಗಿ ಯಶಸ್ವಿಯಾಗಿ ಕೆಲಸ ಮಾಡುತ್ತಿರುವ ಉದಾಹರಣೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
2028ರ ಗುರಿ ಸಾಧನೆಗೆ ಹೊಸಬರ ಪಾತ್ರ:
ಹೊಸದಾಗಿ ಆಯ್ಕೆಯಾದ ಶಾಸಕರು ಕಾಂಗ್ರೆಸ್ ಐಡಿಯಾಲಜಿ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇಂತಹ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಇದು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವನ್ನು ಶಾಸಕರು ವ್ಯಕ್ತಪಡಿಸಿದ್ದಾರೆ.