ನವದೆಹಲಿ: ದಕ್ಷಿಣ ದೆಹಲಿಯ ಮಾಳ್ವಿಯಾ ನಗರದಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ವಿದೇಶಿಯರು ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 8:50ರ ವೇಳೆಗೆ ಲೆಮನ್ ಗ್ರೀನ್ ರೆಸ್ಟೋರೆಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಅವಘಡದಲ್ಲಿ 21 ಮಂದಿ ಸಾವನ್ನಪ್ಪಿದ್ದು ಇವರಲ್ಲಿ ವಿದೇಶಿಯರು ಎನ್ನಲಾಗಿದೆ. ಜತೆಗೆ 37 ಮಂದಿಯನ್ನು ರಕ್ಷಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಆರು ಅಂತಸ್ತಿನ ಕಟ್ಟಡದಲ್ಲಿ ಮೊದಲಿಗೆ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ನೋಡು ನೋಡುತ್ತಿದ್ದಂತೆ ಇತರೆ ಮಾಳಿಗೆಗಳಿಗೂ ಹರಡಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹತ್ತು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.