2026-03-07 01:19:34

Ex-Prime Minister Deve Gowdas | ಹಲಸು ಹುಣಸೆ ನೇರಳೆ ಮಂಡಳಿ ರಚನೆಗೆ ಮಾಜಿ ಪ್ರಧಾನಿ ದೇವೇಗೌಡ ಮನವಿ | Speed News Kannada

Ex-Prime Minister Deve Gowdas | ಹಲಸು ಹುಣಸೆ ನೇರಳೆ ಮಂಡಳಿ ರಚನೆಗೆ ಮಾಜಿ ಪ್ರಧಾನಿ ದೇವೇಗೌಡ ಮನವಿ | Speed News Kannada

ನವದೆಹಲಿ: ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿರುವ ಹಲಸು, ಹುಣಸೆ ಮತ್ತು ನೇರಳೆಗೆ ಉತ್ತೇಜನ ನೀಡುವುದಕ್ಕೆ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ರಚಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ತಮ್ಮ ನಿವಾಸಕ್ಕೆ ಆಗಮಿಸಿದ್ದ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮಾಜಿ ಪ್ರಧಾನಿಗಳು ಮನವಿ ಪತ್ರವನ್ನು ಸಲ್ಲಿಸಿ ಮಂಡಳಿ ರಚನೆ ಹಾಗೂ ಕರ್ನಾಟಕದ ತೆಂಗು ವಲಯಕ್ಕೆ ಹೆಚ್ಚುವರಿ ಬಜೆಟ್‌ ಅನುದಾನ ಒದಗಿಸುವ  ಅಗತ್ಯವನ್ನು ಒತ್ತಿ ಹೇಳಿದರು.
ನಂತರ ಸಂಸತ್‌ ಭವನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾದ ಮಾಜಿ ಪ್ರಧಾನಿಗಳು, ಸಚಿವರಿಗೆ ಕೂಡ  ಹಲಸು, ಹುಣಸೆ ಮತ್ತು ನೇರಳೆಗೆ ಪ್ರತ್ಯೇಕ ಮಂಡಳಿ ರಚಿಸುವ ಮನವಿ ಪತ್ರ ಸಲ್ಲಿಸಿದರು.
ಔಷಧಿಯ ಗುಣಗಳುಳ್ಳ ಹುಣಸೆ ಹಣ್ಣು, ಹಲಸು ಮತ್ತು ನೇರಳೆ ಭಾರತದಲ್ಲಿ  ಶತಮಾನಗಳಿಂದ ಬೆಳೆಯುವ ಪೌಷ್ಟಿಕಾಂಶಯುಕ್ತ ಹಣ್ಣಿನ ಬೆಳೆಗಳಾಗಿವೆ. ಇವು ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ಅವು ನೈಸರ್ಗಿಕವಾಗಿ ದೀರ್ಘಕಾಲ ಫಲವನ್ನು ನೀಡುತ್ತವೆ. ಕಡಿಮೆ ಮಳೆಯ ಅಗತ್ಯವಿದ್ದು, ಅತಿ ಕಡಿಮೆ ವೆಚ್ಚದಲ್ಲಿ ಬೆಳೆಸಲಾಗುತ್ತದೆ. ಅದರಲ್ಲಿಯೂ ಹುಣಸೆ ಹಣ್ಣನ್ನು ದೇಶಾದ್ಯಂತ ಬೆಳೆಯಲಾಗುತ್ತಿದೆ. ಮಧ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಈ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಹಲಸು ಮತ್ತು ನೇರಳೆಯನ್ನು ಹೆಚ್ಚಾಗಿ ಭಾರತದ ದಕ್ಷಿಣ, ಮಧ್ಯ, ಪೂರ್ವ ರಾಜ್ಯಗಳಲ್ಲಿ ಬೆಳೆಸಲಾಗುತ್ತದೆ. ಭಾರತವು ಹುಣಸೆ ಹಣ್ಣು, ಹಲಸು ಮತ್ತು ನೇರಳೆಗಳ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಈ ಹಿನ್ನೆಲೆ ಮಂಡಳಿ ರಚನೆ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಈ ಬೆಳೆಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಇಬ್ಬರೂ ಸಚಿವರಿಗೂ ಮಾಜಿ ಪ್ರಧಾನಿಗಳು ವಿವರಿಸಿದರು.
ಈ ಹಣ್ಣುಗಳು ಮತ್ತು ಅವುಗಳ ಉಪ ಉತ್ಪನ್ನಗಳು ದೇಶೀಯ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ. ಇವುಗಳಲ್ಲಿ ಔಷಧಿಯ ಗುಣಗಳು ಇರುವುದರಿಂದ ವಿದೇಶಗಳಲ್ಲಿ ಭಾರೀ ಬೇಡಿಕೆಯನ್ನು ಹೊಂದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಉದ್ಯೋಗಾವಕಾಶವನ್ನು ಸೃಷ್ಟಿಸುವುದರ ಜೊತೆಗೆ ರಾಷ್ಟ್ರೀಯ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತವೆ. ಹೀಗಾಗಿ ಮಂಡಳಿ ರಚನೆ ಮಾಡುವಂತೆ ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.
ಆರಂಭದಲ್ಲಿ ಎರಡು ಅಥವಾ ಮೂರು ರಾಜ್ಯಗಳಲ್ಲಿ ಪೈಲಟ್ ಯೋಜನೆ ಮಾದರಿಯಲ್ಲಿ ಇದನ್ನು ಅನುಷ್ಠಾನಕ್ಕೆ ತರಬಹುದು. ಎರಡನೇ ಹಂತದಲ್ಲಿ ದೇಶಾದ್ಯಂತ ಇದನ್ನು ವಿಸ್ತರಿಸಬಹುದು. ರೈತರಿಗೆ ಹೆಚ್ಚು ಲಾಭ, ಆರ್ಥಿಕ ಶಕ್ತಿ ತಂದುಕೊಡಲಿರುವ ಈ ಮೂರು ಹಣ್ಣುಗಳ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ರಾಷ್ಟ್ರೀಯ ಮಟ್ಟದಲ್ಲಿ ಮಂಡಳಿಯನ್ನು ರಚಿಸಬೇಕಾಗಿದೆ. ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ ವಾರ್ಷಿಕ 3000 ಕೋಟಿ ರೂ.ಗಳ ಬಜೆಟ್ ಅನ್ನು ಮೀಸಲಿಡಬೇಕು ಎಂದು ಮಾಜಿ ಪ್ರಧಾನಿಗಳು ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.