ಬೆಂಗಳೂರು: ಕನಕದಾಸರು ಸಾಮಾಜಿಕ ಅವ್ಯವಸ್ಥೆಯನ್ನು ಸರಿಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರಿಂದ ಅವರನ್ನು ವಿಶ್ವಮಾನವರಾಗಿ ಕಾಣಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ಆಯೋಜಿಸಿದ್ದ ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಸಂಪುಟಗಳ 40 ಕೃತಿಗಳ ಬಿಡುಗಡೆ ಮತ್ತು ಕನಕ ಶಿಲ್ಪವನ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕನಕದಾಸರು ಭಕ್ತಿ ಪಂಥದ ಕವಿ, ಭಕ್ತರಲ್ಲದೆ ಸಮಾಜದ ಅಂಕುಡೊಂಡುಗಳನ್ನು ತಿದ್ದುವ, ಮೂಡನಂಬಿಕೆಗಳ ವಿರುದ್ಧ ಕೆಲಸ ಮಾಡಿದ ಸಮಾಜ ಸುಧಾರಕರೂ ಹೌದು. ಇಂದಿಗೂ ಕನಕದಾಸರು ಹಾಗೂ ಬಸವಣ್ಣ ಬಯಸಿದ ಸಮಾಜ ನಿರ್ಮಾಣ ಆಗಿಲ್ಲ. ಸಮಸಮಾಜದ ಕನಸು ಕಂಡ ಇವರ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳುವುದು ಅವಶ್ಯ ಎಂದರು.
ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಅನೇಕ ಭಾಷೆಗಳಿಗೆ ತರ್ಜಮೆಯಾಗಿದ್ದು ದಾಸ ಸಾಹಿತ್ಯವು ಅನೇಕ ಭಾಷೆಗಳಲ್ಲಿ ಪ್ರಚಾರವಾಗುತ್ತಿರುವುದು ಶ್ಲಾಘನೀಯ. ಕನಕದಾಸರ ಸಾಹಿತ್ಯ ಬೇರೆ ರಾಜ್ಯಗಳಿಗೂ ತಲುಪುತ್ತಿರುವುದು ಸಂತಸದ ಸಂಗತಿ ಎಂದರು.
ಕನಕದಾಸರು ಬಹು ಮುಖ ಪ್ರತಿಭೆಯಾಗಿದ್ದರು. ಕನಕದಾಸರ ಸಾಹಿತ್ಯ ಸೃಷ್ಠಿ ಅದ್ಭುತವಾಗಿದ್ದು, 350 ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಅವರ ಕೃತಿಗಳನ್ನು ಬೇರೆ ಭಾಷೆಗೆ ತರ್ಜುಮೆ ಮಾಡಿದ ಹಲವು ಭಾಷಾಂತರಕಾರರಿಗೆ ಸರ್ಕಾರದ ಪರವಾಗಿ ಅಭಿನಂದಿಸಲಾಗಿದೆ. ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣ ಅವರ ನೇತೃತ್ವದಲ್ಲಿ ಕನಕದಾಸರ ಕೃತಿಗಳು 14 ಭಾಷೆಗೆ ಭಾಷಾಂತರಗೊಂಡಿದೆ. ಕನಕರ ಕೃತಿಗಳು ದೇಶ ವಿದೇಶಗಳಿಗೆ ತಲುಪಲು ಇದು ಸಹಕಾರಿಯಾಗಿದೆ. ಈ ಪ್ರತಿಗಳ ಹೆಚ್ಚಿನ ಮುದ್ರಣಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಮುನಿರತ್ನ, ಸಂತ ಕವಿ ಕನಕದಾಸ ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ. ತ ಚಿಕ್ಕಣ್ಣ, ಸಾಹಿತಿ ಬಂಜಗೆರೆ ಜಯಪ್ರಕಾಶ್ ಉಪಸ್ಥಿತರಿದ್ದರು.