2026-06-08 01:28:42

election result gave strength to pm modi;by vijayendra|ಪ್ರಧಾನಿ ಮೋದಿ ನಾಯಕತ್ವಕ್ಕೆ ಶಕ್ತಿ ತುಂಬುವ ಫಲಿತಾಂಶ: ಬಿ.ವೈ.ವಿಜಯೇಂದ್ರ ವಿಶ್ಲೇಷಣೆ| speed news kannada

election result gave strength to pm modi;by vijayendra|ಪ್ರಧಾನಿ ಮೋದಿ ನಾಯಕತ್ವಕ್ಕೆ ಶಕ್ತಿ ತುಂಬುವ ಫಲಿತಾಂಶ: ಬಿ.ವೈ.ವಿಜಯೇಂದ್ರ ವಿಶ್ಲೇಷಣೆ| speed news kannada

ಬೆಂಗಳೂರು: ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಗೆಲುವು ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ದೊಡ್ಡ ಶಕ್ತಿಯನ್ನು ತುಂಬಿದಂತಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್‍ ಅವರ ಮೊದಲ ಚುನಾವಣೆ ಇದಾಗಿದ್ದು, ಬಹುದೊಡ್ಡ ಸಂದೇಶವನ್ನು ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರ ತಂತ್ರಗಾರಿಕೆ ಈ ಗೆಲುವಿನ ಹಿಂದಿದೆ ಎಂದರು.

ಪಶ್ಚಿಮ ಬಂಗಾಲದ ಗೆಲುವಿಗಾಗಿ ಅಲ್ಲಿನ ಕಾರ್ಯಕರ್ತರಿಗೆ ನಾವು ದೊಡ್ಡ ಸಲಾಂ ಹೇಳಬೇಕಿದೆ. ಅಲ್ಲಿ ಹಲವು ದಶಕಗಳಿಂದ ನಮ್ಮ ಕಾರ್ಯಕರ್ತರ ಮೇಲೆ ನಿರಂತರ ದಬ್ಬಾಳಿಕೆ ಆಗುತ್ತಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದ್ದಾರೆ ಎಂದು ಹೇಳಿದರು.

 

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಏರುಪೇರು:

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗಳ ಕುರಿತು ಪ್ರಸ್ತಾಪಿಸಿದ ಅವರು, ದಾವಣಗೆರೆ ದಕ್ಷಿಣದಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಬಾಗಲಕೋಟೆಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಈ ಬಾರಿ ಮತದಾರರು ನಮ್ಮ ಕೈಹಿಡಿಯುವ ವಿಶ್ವಾಸ ಇತ್ತು. ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಯವರು ಬಾಗಲಕೋಟೆಯಲ್ಲಿ ಬಂದು 15 ದಿನ ಬೀಡು ಬಿಟ್ಟಿದ್ದರು. ಸಚಿವ ಸಂಪುಟದ ಸದಸ್ಯರೂ ಬೀಡು ಬಿಟ್ಟಿದ್ದರು. ಆದರೂ ಗೆಲುವಿನ ವಿಶ್ವಾಸ ನಮಗಿತ್ತು. ಆದರೆ, ಬಾಗಲಕೋಟೆಯಲ್ಲಿ ನಮಗೆ ಹಿನ್ನಡೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.

ಉಪ ಚುನಾವಣೆ ಗೆದ್ದಿದೆ ಎಂದರೆ ಕಾಂಗ್ರೆಸ್ ಪಕ್ಷದ ಕಡೆ ಒಲವಿದೆ ಎನ್ನಲು ಸಾಧ್ಯವಿಲ್ಲ. ಬಾಗಲಕೋಟೆಯಲ್ಲಿನ ಹಿನ್ನಡೆ ಕುರಿತು ನಾವು ಮುಖಂಡರ ಜೊತೆ ಚರ್ಚೆ ಮಾಡಬೇಕಾಗಿದೆ. ನಂತರ ನಮ್ಮ ಸಂಘಟಿತ ಕಾರ್ಯ ಕುರಿತು ಕಾರ್ಯತಂತ್ರ ಮಾಡುತ್ತೇವೆ ಎಂದು ನುಡಿದರು.

ಎರಡೂ ಕ್ಷೇತ್ರಗಳಲ್ಲಿ ಯಾವುದೇ ಸಣ್ಣ ಒಡಕಿಲ್ಲದೇ, ಸ್ಥಳೀಯ ಮುಖಂಡರು ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿ ಪರವಾಗಿ ಒಟ್ಟಾಗಿ, ಒಂದಾಗಿ ಎಲ್ಲರೂ ಶ್ರಮ ಹಾಕಿದ್ದಾರೆ. ಪಕ್ಷದ ನಾಯಕರು ಸಂಘಟಿತರಾಗಿ ಶ್ರಮ ಹಾಕಿದ್ದಾರೆ. ನಾವು ಕೂಡ ಕೈಜೋಡಿಸಿದ್ದೇವೆ. ಕಾರ್ಯಕರ್ತರೂ ಹಗಲೂ ರಾತ್ರಿ ಶ್ರಮ ಹಾಕಿದ್ದಾರೆ ಎಂದು ಅವರು ವಿವರಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ಪ್ರತಾಪ್ ಸಿಂಹ ನಾಯಕ್, ಶಾಸಕ ಹರೀಶ್ ಪೂಂಜಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.