2026-06-08 04:55:03

ಬಿಡದಿ ಟೌನ್‌ ಶಿಪ್‌ ಯೋಜನೆ ಕೈ ಬಿಡಲು ರೈತ ಮುಖಂಡರ ಆಗ್ರಹ|Speed News Kannada

 ಬಿಡದಿ ಟೌನ್‌ ಶಿಪ್‌ ಯೋಜನೆ ಕೈ ಬಿಡಲು ರೈತ ಮುಖಂಡರ ಆಗ್ರಹ|Speed News Kannada

ಬೆಂಗಳೂರು: ರೈತರನ್ನು ಉಳಿಸುವ ನಿಟ್ಟಿನಲ್ಲಿ ಉದ್ದೇಶಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವಂತೆ ‘ಸಂಯುಕ್ತ ಹೋರಾಟ– ಕರ್ನಾಟಕ’ ಸಮಿತಿ ಆಗ್ರಹಪಡಿಸಿದೆ. ಈ ಯೋಜನೆಗೆ ನೀಡಿರುವ ಅನುಮೋದನೆಯನ್ನು ಹಿಂಪಡೆದು, ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದೂ ಒತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ‘ಸಂಯುಕ್ತ ಹೋರಾಟ– ಕರ್ನಾಟಕ’ ಸಮಿತಿ ಮುಖಂಡ ಬಡಗಲಪುರ ನಾಗೇಂದ್ರ ಫಲವತ್ತಾದ ಮತ್ತು ನೀರಾವರಿ ಭೂಮಿಯನ್ನು ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ರೈತ ವಿರೋಧಿಯಾಗಿದೆ. ಪರಿಸರಕ್ಕೂ ಹಾನಿಯಾಗುತ್ತದೆ. ಆದ್ದರಿಂದ ಇಂತಹಅಪಾಯಕಾರಿ ಯೋಜನೆಗೆ ನೀಡಿರುವ ಅನುಮೋದನೆಯನ್ನು ಸರ್ಕಾರ ವಾಪಸ್ ಪಡೆಯಬೇಕು‌ ಎಂದು ಆಗ್ರಹಪಡಿಸಿದರು.

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 25 ಗ್ರಾಮಗಳ ಸುಮಾರು 9,640 ಎಕರೆ ಕೃಷಿ ಭೂಮಿ ಫಲವತ್ತಾಗಿದೆ. ಇಲ್ಲಿ ವರ್ಷಪೂರ್ತಿ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳು, ರೇಷ್ಮೆ, ಜೋಳ, ರಾಗಿ, ವಿವಿಧ ರೀತಿಯ ಹಣ್ಣು, ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಬೆಂಗಳೂರು ನಗರಕ್ಕೆ ಇಲ್ಲಿಂದಲೇ ಹಾಲು, ಹಣ್ಣು, ತರಕಾರಿ ಮೊದಲಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಈ ಭೂಮಿಯನ್ನು ಕಿತ್ತುಕೊಂಡರೆ ರೈತರು ಬೀದಿಗೆ ಬೀಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರು ಮತ್ತು ಗ್ರಾಮಸ್ಥರು 428 ದಿನದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಆದರೂ ಸರ್ಕಾರ ರೈತರ ಜೊತೆ ಸಮಾಲೋಚನೆ ನಡೆಸದೆ ಏಕಾಏಕಿ ಅನುಮೋದನೆ ನೀಡಿರುವುದು ಸರಿಯಲ್ಲ. ಬಿಡದಿ ಸಮಗ್ರ ಉಪ ನಗರ ಯೋಜನೆಯ ಭೂಸ್ವಾಧೀನದ ಪ್ರಾಥಮಿಕ ಅಧಿಸೂಚನೆಗೆ ರೈತರು ಆಕ್ಷೇಪಣೆ ಸಲ್ಲಿಸಿದ್ದರೂ ಅದನ್ನು ಪರಿಗಣಿಸಿಲ್ಲ. ಸ್ವತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರನ್ನು ಲೆಕ್ಕಿಸದೆ ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ, ಒತ್ತಡಹಾಕಿ ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.