ಎರ್ಬಿಲ್: ಉತ್ತರ ಇರಾಕ್ ನ ಎರ್ಬಿಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಡೋನ್ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಡೋನ್ ಪತನವಾದ ಪ್ರದೇಶದಿಂದ ದಟ್ಟ ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಿಂದ ಹೊಗೆ ಆಕಾಶಕ್ಕೇರುತ್ತಿರುವುದು ಗೋಚರಿಸಿದೆ ಎಂದು ಹೇಳಲಾಗಿದೆ. ಘಟನೆಯಿಂದ ಸಂಭವಿಸಿದ ಹಾನಿ ಅಥವಾ ಗಾಯಾಳುಗಳ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇಸ್ರೇಲ್ ಹಾಗೂ ಅಮೆರಿಕದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಪ್ರತಿಕ್ರಿಯೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಇರಾಕ್ ನ ಸ್ನಾಯತ್ತ ಕುರ್ದಿಶ್ ಪ್ರದೇಶದಲ್ಲಿರುವ ಎರ್ಬಿಲ್ ವಿಮಾನ ನಿಲ್ದಾಣವನ್ನು ಎರಡು ಬಾರಿ ಗುರಿಯಾಗಿಸಲಾಗಿದೆ ಎಂದು Al Jazeera ವರದಿ ಮಾಡಿದೆ.
ಶನಿವಾರ ವಾಯು ರಕ್ಷಣಾ ಪಡೆಗಳು ಡೋನ್ ದಾಳಿಯನ್ನು ತಡೆದಿವೆ ಎಂಬ ವರದಿಗಳೂ ಲಭ್ಯವಾಗಿವೆ. ಐಎಸ್‌ಐಎಲ್ (ಐಸಿಸ್) ವಿರುದ್ಧದ ಅಂತಾರಾಷ್ಟ್ರೀಯ ಒಕ್ಕೂಟದ ಭಾಗವಾಗಿ ಇರಾಕ್‌ನ ಸ್ವಾಯತ್ತ ಕುರ್ದಿಶ್ ಪ್ರದೇಶದಲ್ಲಿ ಅಮೆರಿಕದ ಪಡೆಗಳು ಇನ್ನೂ ನಿಯೋಜಿತವಾಗಿವೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಖತರ್ ರಾಜಧಾನಿ ದೋಹಾದಾದ್ಯಂತ ಕನಿಷ್ಠ 11 ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ನಗರದ ನಿವಾಸಿಗಳು ತಿಳಿಸಿದ್ದಾರೆ. ದೋಹಾ ನಗರದ ಮೇಲಿನ ಆಕಾಶದಲ್ಲಿ ಸ್ಫೋಟಗಳು ಸಂಭವಿಸಿದಂತೆ ಕಂಡುಬಂದಿದೆ ಎಂದು ತಿಳಿದು ಬಂದಿದೆ. ಇನ್ನೊಂದೆಡೆ, ದುಬೈ ನಗರದಲ್ಲೂ "ಹಲವಾರು ದೊಡ್ಡ ಸ್ಪೋಟಗಳು" ಕೇಳಿಬಂದಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.