ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ಯುದ್ಧದ ಕಿಚ್ಚು ಹೊತ್ತಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದೇಶಕ್ಕೆ ಹಿಂದೆಂದೂ ನೀಡದಂತಹ ಭೀಕರ ಎಚ್ಚರಿಕೆಯನ್ನ ನೀಡಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ವಶಪಡಿಸಿಕೊಳ್ಳುವ ಶಕ್ತಿ ಅಮೆರಿಕಕ್ಕಿದೆ" ಎಂದು ಗುಡುಗಿದ್ದಾರೆ. ಶ್ವೇತಭವನದ ಸೌತ್ ಲಾನ್‌ನಲ್ಲಿ ಈಸ್ಟರ್ ಸಂಭ್ರಮದ ನಡುವೆಯೇ ಟ್ರಂಪ್ ಇರಾನ್ ವಿರುದ್ಧ ಕೆಂಡಕಾರಿದ್ದಾರೆ. "ಒಂದು ವೇಳೆ ಇರಾನ್ ನಮ್ಮ ಮಾತಿಗೆ ಒಪ್ಪದಿದ್ದರೆ, ಅಲ್ಲಿ ಸೇತುವೆಗಳಾಗಲಿ, ವಿದ್ಯುತ್ ಸ್ಥಾವರಗಳಾಗಲಿ ಏನೂ ಉಳಿಯುವುದಿಲ್ಲ. ಅದೆಲ್ಲಕ್ಕಿಂತ ಭೀಕರವಾದ ಅಸ್ತ್ರಗಳು ನಮ್ಮ ಬಳಿ ಇವೆ" ಎಂದು ನೇರವಾಗಿಯೇ ಎಚ್ಚರಿಸಿದ್ದಾರೆ.
ಮಂಗಳವಾರದಿಂದ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಅವರು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿದ್ದಾರೆ.ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಮಂಡಿಸಿದ್ದ 45 ದಿನಗಳ ಕದನ ವಿರಾಮ ಪ್ರಸ್ತಾಪವನ್ನು ಇರಾನ್ ನೇರವಾಗಿ ತಿರಸ್ಕರಿಸಿದೆ. ಇದರಿಂದ ಕೆರಳಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಇರಾನ್ ಇಟ್ಟಿರುವ ಗಡುವಿನ ಮುನ್ನವೇ ಈ ಹೇಳಿಕೆ ನೀಡಿರುವುದು ಭಾರಿ ಸಂಚಲನ ಮೂಡಿಸಿದೆ.
ಕಳೆದ 38 ದಿನಗಳಿಂದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಮುಂದುವರಿದಿದೆ. ಇದೇ ವೇಳೆ ಇರಾನ್‌ನ ಶತ್ರು ಪ್ರದೇಶದ ಆಳದಲ್ಲಿ ಸಿಲುಕಿದ್ದ ಅಮೆರಿಕದ ಇಬ್ಬರು ವಾಯುಪಡೆ ಸಿಬ್ಬಂದಿಯನ್ನು 21 ವಿಮಾನಗಳ ಸಹಾಯದಿಂದ ಸಾಹಸಮಯವಾಗಿ ರಕ್ಷಿಸಲಾಗಿದೆ ಎಂದು ಟ್ರಂಪ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ಈಗ 'ನಾಳೆ ರಾತ್ರಿಯೇ ಯುದ್ಧ' ಎನ್ನುವಂತಹ ಗಂಭೀರ ಎಚ್ಚರಿಕೆ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಆತಂಕಕ್ಕೆ ಕಾರಣವಾಗಿದೆ.