ಬೆಂಗಳೂರು: ಅಸ್ಸಾಂ ವಿಧಾನಸಭೆ ಚುನಾವಣೆ ಸಂಬಂಧ ದೆಹಲಿಯಲ್ಲಿ ಬೀಡುಬಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ವಿವಿಧ ಎಐಸಿಸಿ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ನಿನ್ನೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಅಸ್ಸಾಂ ಪ್ರವಾಸದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಹಸ್ತಾಂತರ ಕುರಿತು ವಿಸ್ತೃತ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ನಂತರವೂ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲ ನಿರಾಕರಿಸುತ್ತಿದ್ದಾರೆ. ಅಧಿಕಾರ ಹಿಡಿಯೇಬೇಕು ಎಂದು ಪಟ್ಟು ಹಿಡಿದಿರುವ ಡಿ.ಕೆ.ಶಿವಕುಮಾರ್ ಶತಾಯಗತಾಯ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.
ಆರಂಭದಲ್ಲಿ ಬಜೆಟ್ ನಂತರ ಎಂದು ಡಿಕೆ ಶಿವಕುಮಾರ್ ಅವರಿಗೆ ಭರವಸೆ ನೀಡಲಾಗಿತ್ತು. ಇದೀಗ ಐದು ರಾಜ್ಯಗಳ ಚುನಾವಣೆ ಮುಗಿಯಲಿ ಎಂದು ಸಬೂಬು ಹೇಳಲಾಗುತ್ತಿದೆ. ಇದರಿಂದ ಡಿಕೆಶಿ ಅವರ ಸಹನೆಯ ಕಟ್ಟೆ ಒಡೆಯುವ ಹಂತದಲ್ಲಿದ್ದು ಯಾವುದೇ ಸಂದರ್ಭದಲ್ಲಿ ಸ್ಫೋಟಗೊಳ್ಳಬಹುದಾಗಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಚಿವ ಸತೀಶ್ ಜಾರಕಿಹೊಳಿ ಕೂಡ ದೆಹಲಿ ಪ್ರವಾಸದಲ್ಲಿರುವುದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಅವರೇ ಜಾರಕಿಹೊಳಿ ಅವರನ್ನು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.