2026-04-23 09:17:10

DK Shiv was furious | ನನ್ನ ಬಣ ಅಂತ ನಾನೆಲ್ಲೂ ಬೋರ್ಡ್ ಹಾಕ್ಕೊಂಡಿಲ್ಲ ಸಿಡಿದೆದ್ದ ಡಿಕೆಶಿ | Speed News Kannada

DK Shiv was furious | ನನ್ನ ಬಣ ಅಂತ ನಾನೆಲ್ಲೂ ಬೋರ್ಡ್ ಹಾಕ್ಕೊಂಡಿಲ್ಲ ಸಿಡಿದೆದ್ದ ಡಿಕೆಶಿ | Speed News Kannada

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ಬಣ ರಾಜಕೀಯದ ಸುದ್ದಿಗಳ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಬಣ ಅಂತ ನಾನೇನಾದರೂ ಬೋರ್ಡ್ ಹಾಕಿಕೊಂಡಿದ್ದೇನಾ ಎಂದು ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಕುಮಾರಪಾರ್ಕ್‌ನಲ್ಲಿರುವ ತಮ್ಮ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್, ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ಬಣ ರಾಜಕೀಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದರು.
ಬಹಳ ದಿನಗಳ ನಂತರ ಸಿಎಂ ಜೊತೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬ ವರದಿಗಾರನ ಮಾತಿಗೆ ಗರಂ ಆದ ಡಿಕೆಶಿ, "ಮಾಧ್ಯಮಗಳಿಗೆ ತಲೆ ಕೆಟ್ಟಿದೆ ಎಂದು ಕಾಣಿಸುತ್ತದೆ. ನಾನು ಮತ್ತು ಸಿದ್ದರಾಮಯ್ಯನವರು ಪ್ರತಿದಿನ ಚರ್ಚೆಗಳನ್ನು ನಡೆಸುತ್ತಲೇ ಇರುತ್ತೇವೆ. ಆದರೆ ನೀವೇ ಸುಮ್ಮನೆ ಏನೇನೋ ಭಿನ್ನಾಭಿಪ್ರಾಯಗಳಿವೆ ಎಂದು ಸುದ್ದಿ ಹಬ್ಬಿಸುತ್ತೀರಿ" ಎಂದು ಕಿಡಿಕಾರಿದರು.
ತಮ್ಮ ಹಾಗೂ ಸಿದ್ದರಾಮಯ್ಯನವರ ಹೆಸರಿನಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂಬ ವಾದವನ್ನು ಅಲ್ಲಗಳೆದ ಅವರು, "ನನ್ನ ಬಣ ಎಂದು ಎಲ್ಲಿದೆ? ಸಿದ್ದರಾಮಯ್ಯನವರ ಬಣ ಎಂದು ಹೇಳುತ್ತೀರಲ್ಲಾ, ಅವರೇನಾದರೂ ಬೋರ್ಡ್ ಹಾಕಿಕೊಂಡಿದ್ದಾರಾ? ಅಥವಾ ನಾನು ನನ್ನ ಗುಂಪು ಎಂದು ಬೋರ್ಡ್ ಹಾಕಿಕೊಂಡಿದ್ದೇನಾ? ಕಾಂಗ್ರೆಸ್ ಪಕ್ಷದ ಎಲ್ಲಾ 139 ಶಾಸಕರು ನನ್ನ ಶಾಸಕರೇ, ಹಾಗೆಯೇ ಅವರೆಲ್ಲರೂ ಸಿದ್ದರಾಮಯ್ಯ ಅವರ ಶಾಸಕರು ಕೂಡ ಹೌದು' ಎಂದು ಸ್ಪಷ್ಟಪಡಿಸಿದರು. ಯಾವುದೇ ಗುಂಪುಗಾರಿಕೆಯ ಅವಶ್ಯಕತೆಯೂ ಇಲ್ಲ ಮತ್ತು ಅಂತಹ ಯಾವುದೇ ಬಣಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ ಅವರು, ಕೇವಲ ಸುದ್ದಿಗಾಗಿ ಅಥವಾ ಚಟಕ್ಕಾಗಿ ಇಂತಹ ಮಾತುಗಳನ್ನು ಆಡುವುದನ್ನು ನಿಲ್ಲಿಸಿ ಎಂದು ಮಾಧ್ಯಮದವರಿಗೆ ಖಡಕ್ ಎಚ್ಚರಿಕೆ ನೀಡಿದರು. ಪಕ್ಷದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ಡಿಕೆಶಿ ಈ ಮೂಲಕ ರವಾನಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.