2026-07-23 06:40:05

Delhi Capitals pacer Lungi Ngidi health improves | ಡೆಲ್ಲಿ ಕ್ಯಾಪಿಟಲ್ಸ್‌ ವೇಗಿ ಲುಂಗಿ ಎನ್‌ಗಿಡಿ ಆರೋಗ್ಯದಲ್ಲಿ ಚೇತರಿಕೆ | Speed news kannada

Delhi Capitals pacer Lungi Ngidi health improves | ಡೆಲ್ಲಿ ಕ್ಯಾಪಿಟಲ್ಸ್‌ ವೇಗಿ ಲುಂಗಿ ಎನ್‌ಗಿಡಿ ಆರೋಗ್ಯದಲ್ಲಿ ಚೇತರಿಕೆ | Speed news kannada

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿಎನ್‌ಗಿಡಿ ಅವರು ಈಗ ಚೇತರಿಸಿಕೊಂಡಿದ್ದಾರೆ. ಈ ಚೇತರಿಕೆಯ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಅವರು ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೋಟೆಲ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಸಂಜೆ ನಡೆದ ಐಪಿಎಲ್​​ನ 35ನೇ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಮೂರನೇ ಓವರ್‌ನಲ್ಲಿ ಮಿಡ್-ಆಫ್‌ನಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಲುಂಗಿ ಎನ್​ಗಿಡಿ ಅವರು ಸಮತೋಲನ ತಪ್ಪಿ ಹಿಮ್ಮುಖವಾಗಿ ಬಿದಿದ್ದರು. ಈ ವೇಳೆ ಅವರ ಕುತ್ತಿಗೆ ಮತ್ತು ತಲೆಯ ಹಿಂಭಾಗ ನೆಲಕ್ಕೆ ಬಲವಾಗಿ ಬಡಿದಿತ್ತು. ಮೈದಾನದಲ್ಲೇ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ, ಅವರನ್ನು ತಕ್ಷಣವೇ ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು. ಇತ್ತ ವೈದ್ಯರು ವಿಶ್ರಾಂತಿ ಸೂಚಿಸಿರುವ ಕಾರಣ ಲುಂಗಿ ಎನ್​ಗಿಡಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್​ ಪರ ಮಿಚೆಲ್ ಸ್ಟಾರ್ಕ್​ ಕಣಕ್ಕಿಳಿಯಲಿದ್ದಾರೆ. ಸ್ಟಾರ್ಕ್​ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿರುವ ಸ್ಟಾರ್ಕ್​ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.