ಸ್ಯಾಂಡಲ್‌ವುಡ್ ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಧನಂಜಯ್ ಪತ್ನಿ ಡಾ.ಧನ್ಯತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂಭ್ರಮದ ಸುದ್ದಿಯನ್ನು ಡಾಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈಗ ತಾನೇ ಜನಿಸಿದ ತಮ್ಮ ಪುತ್ರನ ಕೈ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆನೇ ಧನಂಜಯ್ ತಂದೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು. ಜೊತೆಗೆ ಪತ್ನಿ ಡಾ.ಧನ್ಯತಾ ಅವರೊಂದಿಗಿನ ಮೆಟರ್ನಿಟಿ ಫೋಟೋಶೂಟ್ ಮಾಡಿಸಿ, ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸಿದ್ದರು. ಈಗ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಸಂತಸವನ್ನು ಅವರೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ 2025 ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಅದಾದ ಒಂದು ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ವರ್ಷ ಜನವರಿ ತಿಂಗಳಲ್ಲಿ ತಂದೆಯಾಗುತ್ತಿರುವ ಸುದ್ದಿಯನ್ನು ನೀಡಿದ್ದರು.
ಈಗ ಡಾಲಿ ಧನಂಜಯ್ ತಮ್ಮ ಪುತ್ರನ ಕೈನ ಫೋಟೋವನ್ನ ಶೇರ್ ಮಾಡಿ. ನಿಮ್ಮ ಪ್ರೀತಿ ಆಶೀರ್ವಾದವಿರಲಿ" ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಡಾಲಿ ಧನಂಜಯ್ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಚಿತ್ರರಂಗದ ಗಣ್ಯರು ಸೇರಿದಂತೆ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ತಂದೆಯಾಗಿರುವ ಖುಷಿಯಲ್ಲಿರುವ ಡಾಲಿ ಧನಂಜಯ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಅಣ್ಣಾ ಫ್ರಮ್ ಮೆಕ್ಸಿಕೋ', 'ಮದರ್ ಪ್ರಾಮೀಸ್', 'ಜಿಂಗೋ', 'ಡಾಲಿ', 'ಆಪರೇಷನ್ ಡ್ರಿಮ್ ಥಿಯೇಟರ್' ಸಿನಿಮಾಗಳು ಕೈಯಲ್ಲಿವೆ. ಇದರೊಂದಿಗೆ ಡಾಲಿ ಧನಂಜಯ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 'ಬಡವ ರಾಸ್ಕಲ್', 'ಟಗರು ಪಲ್ಯ'ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.