2026-07-23 06:16:55

Congress MLA T D Rajegowda retained his MLA seat | ಶೃಂಗೇರಿ ಕ್ಷೇತ್ರ ಮರುಎಣಿಕೆ ಶಾಸಕ ಸ್ಥಾನ ಉಳಿಸಿಕೊಂಡ ಕಾಂಗ್ರೆಸ್‌ ಶಾಸಕ ಟಿ ಡಿ ರಾಜೇಗೌಡ | Speed News Kannada

Congress MLA T D Rajegowda retained his MLA seat | ಶೃಂಗೇರಿ ಕ್ಷೇತ್ರ ಮರುಎಣಿಕೆ ಶಾಸಕ ಸ್ಥಾನ ಉಳಿಸಿಕೊಂಡ ಕಾಂಗ್ರೆಸ್‌ ಶಾಸಕ ಟಿ ಡಿ ರಾಜೇಗೌಡ | Speed News Kannada

ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ ನಡೆದಿದ್ದು, ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಜಯಗಳಿಸಿದ್ದಾರೆ. ಇವರ ಆಯ್ಕೆಯನ್ನು ಪ್ರಶ್ನಿಸಿ ಅಂಚೆ ಮತಗಳ ಮರು ಎಣಿಕೆ ಮಾಡುವಂತೆ ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಕೋರ್ಟ್‌ ಮೊರೆ ಹೋಗಿದ್ದರು.
ಹೈಕೋರ್ಟ್ ಆದೇಶದ ಮೇರೆಗೆ ಇಂದು ಚಿಕ್ಕಮಗಳೂರಿನ IDSG ಕಾಲೇಜಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ ನಡೆಯಿತು. ಇದೀಗ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದಾರೆ. ರಾಜೇಗೌಡ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅವರು ಘೋಷಣೆ ಕೂಗಿ ಸಂಭ್ರಮಿಸಿದರು.
ಗೆಲುವು ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಾಜೇಗೌಡ ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ. ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ಎದುರಾಳಿಯು ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದರು.
ಹಿನ್ನೆಲೆ 
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದ ಮತ ಎಣಿಕೆ ಕುತೂಹಲ ಮೂಡಿಸಿತ್ತು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರ ವಿರುದ್ಧ ಕೇವಲ 201 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 1822 ಅಂಚೆ ಮತಗಳ ಪೈಕಿ 279 ಮತಗಳನ್ನು ತಿರಸ್ಕೃತಗೊಳಿಸಲಾಗಿತ್ತು. ಈ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೀವರಾಜ್ ಅವರು ಮರು ಎಣಿಕೆಗೆ ಮನವಿ ಮಾಡಿದ್ದರು, ಆದರೆ ಅಂದಿನ ಜಿಲ್ಲಾ ಚುನಾವಣಾಧಿಕಾರಿಗಳು ಆ ಮನವಿಯನ್ನು ತಿರಸ್ಕರಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಂಚೆ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.