ನವದೆಹಲಿ: ಇರಾನ್ ಇರಾಕ್ ಅಮೆರಿಕಾ ಯುದ್ಧದ ಹಿನ್ನೆಲೆಯಲ್ಲಿ ಡೀಸೆಲ್, ಪೆಟ್ರೋಲ್ ಮತ್ತು ಅಡಿಗೆ ಇಂಧನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. ದೇಶದಾದ್ಯಂತ ಸಿಲಿಂಡರ್ ಬೆಲೆಯಲ್ಲಿ ರೂ. 42ರಿಂದ ರ>53 ರಷ್ಟು ಹೆಚ್ಚಳವಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ದರದಲ್ಲಿ ಏರಿಕೆಯಾಗಿಲ್ಲ.
ಬೆಂಗಳೂರಿನಲ್ಲಿ ಪ್ರತಿ ಸಿಲಿಂಡರ್ ಬೆಲೆ 3,198 ರೂ.ಗಳಿಗೆ ಏರಿಕೆಯಾಗಿದೆ.
ಈ ಮೂಲಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ರೂ. 42 ಹೆಚ್ಚಳವಾಗಿದ್ದು, ರೂ. 3,113ಕ್ಕೆ ಏರಿಕೆ ಕಂಡಿದೆ. ಕೋಲ್ಕತ್ತದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ರೂ.3,2250ಕ್ಕೆ ಏರಿದೆ.
ಈ ವರ್ಷದ ಆರಂಭದಿಂದಲೂ ವಾಣಿಜ್ಯ ಬಳೆಕೆಯ ಎಲ್‌ಪಿಜಿ ಬೆಲೆ ಏರಿಕೆ ಕಾಣುತ್ತಲೇ ಇದೆ. ದೆಹಲಿಯಲ್ಲಿ ಜನವರಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ರೂ.1,691.50 . ಇತ್ತು. ಈಗ ರೂ. 3,113.50ಗೆ ಏರಿದೆ. ಫೆಬ್ರುವರಿಯಲ್ಲಿ, ₹49, ಮಾರ್ಚ್‌ನಲ್ಲಿ ₹115, ಏಪ್ರಿಲ್‌ನಲ್ಲಿ ₹993 ಹೆಚ್ಚಳ ಮಾಡಲಾಗಿತ್ತು. ಇದರ ಪರಿಣಾಮವಾಗಿ ಕೇವಲ ಐದು ತಿಂಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ದ್ವಿಗುಣಗೊಂಡಿದೆ.
ಮುಂಬೈನಲ್ಲಿ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹3,024.50. ಚೆನ್ನೈನಲ್ಲಿ ₹3,232 ಹಾಗೂ ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಕ್ರಮವಾಗಿ ₹3,294 ಮತ್ತು ₹3,322 ಆಗಿದೆ.
ಸರ್ಕಾರವು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಕನಿಷ್ಠ 30 ದಿನಗಳ ಬೇಡಿಕೆಗೆ ಬೇಕಾದಷ್ಟು ಎಲ್‌ಪಿಜಿ ಸಂಗ್ರಹಕ್ಕೆ ನಿರ್ದೇಶನ ನೀಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.