2026-03-07 04:01:49

CM Yediyurappas birthday today | ಇಂದು ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ವೈವಿಧ್ಯಮಯ ಕಾರ್ಯಕ್ರಮಗಳು | Speed News Kannada

CM Yediyurappas birthday today | ಇಂದು ಮಾಜಿ ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ ವೈವಿಧ್ಯಮಯ ಕಾರ್ಯಕ್ರಮಗಳು | Speed News Kannada

ಶಿಕಾರಿಪುರ: ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಜಿಲ್ಲೆಯ ಶಿಕಾರಿಪುರದಲ್ಲಿ ಅದ್ದೂರಿಯಾಗಿ ಆಚರಿಸಲು ಕುಟುಂಬದವರು ನಿರ್ಧರಿಸಿದ್ದು ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ಇಂದು ಬೆಳಗ್ಗೆಯಿಂದ ಅವರ ನಿವಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಜೆ ಶಿಕಾರಿಪುರದ ಎಸ್‌.ಎಸ್‌. ರಸ್ತೆಯಲ್ಲಿರುವ ಕುಮದ್ವತಿ ಕಾಲೇಜು ಆವರಣದ ಏಕಲವ್ಯ ಕ್ರೀಡಾಂಗಣದಲ್ಲಿ ‘ಗೌರವ ಸಮರ್ಪಣಾ’ ಸಮಾರಂಭವನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ಈ ವೇಳೆ, ಯಡಿಯೂರಪ್ಪನವರು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಕಾರಣಕರ್ತರಾದ ಕ್ಷೇತ್ರದ ಎಲ್ಲ ವರ್ಗದ ಜನತೆ, ಮುಖಂಡರನ್ನು ವೇದಿಕೆಯಲ್ಲಿ ಗೌರವಿಸಲಾಗುತ್ತದೆ.
ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಆನಂದಪುರದ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ತಾಲೂಕಿನ ಎಲ್ಲಾ ಮಠಾಧೀಶರು ಸಾನಿಧ್ಯ ವಹಿಸಲಿದ್ದಾರೆ.
ನಂತರ ಅರ್ಜುನ್ ಜನ್ಯಾ ತಂಡದಿಂದ ‘ಸಂಗೀತ ಹಬ್ಬ’ ನಡೆಯಲಿದೆ. ನಿರೂಪಕಿ ಅನುಶ್ರೀ, ಖ್ಯಾತ ಗಾಯಕಿ ಮಂಗ್ಲಿ, ಪೃಥ್ವಿಭಟ್, ವ್ಯಾಸರಾಜ್, ಐಶ್ವರ್ಯ, ಬಿಗ್‌ಬಾಸ್ ವಿಜೇತ ಗಿಲ್ಲಿ ನಟರಾಜ್, ಕಾವ್ಯ ಸಹಿತ ಹಲವು ಖ್ಯಾತನಾಮ ಕಲಾವಿದರಿಂದ ಮನೋರಂಜನಾ ಕರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮಕ್ಕಾಗಿ ಏಕಲವ್ಯ ಕ್ರೀಡಾಂಗಣದಲ್ಲಿ ವಿಶಾಲ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಇಡೀ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್‌ಗಳು, ಬಿಜೆಪಿ ಬ್ಯಾನರ್‌ ಗಳು ರಾರಾಜಿಸುತ್ತಿವೆ. ಇಡೀ ಶಿಕಾರಿಪುರ ಪಟ್ಟಣ ಯಡಿಯೂರಪ್ಪಮಯವಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.