2026-05-28 12:23:51

ನಿರ್ಗಮಿತ ಸಿಎಂ ಸಿದ್ದರಾಮಯ್ಯ ವಿದಾಯದ ಮಾತುಗಳು: ಸಾಧನೆಯ ಶ್ರೇಯ ಕನ್ನಡಿಗರಿಗೆ ಅರ್ಪಣೆ| Speed News Kannada

ನಿರ್ಗಮಿತ ಸಿಎಂ ಸಿದ್ದರಾಮಯ್ಯ ವಿದಾಯದ ಮಾತುಗಳು: ಸಾಧನೆಯ ಶ್ರೇಯ ಕನ್ನಡಿಗರಿಗೆ ಅರ್ಪಣೆ| Speed News Kannada

ಬೆಂಗಳೂರು: ನಾಳೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲಿರುವ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ವಿದಾಯದ ಮಾತುಗಳನ್ನಾಡುತ್ತಿದ್ದಾರೆ. ಸರ್ಕಾರಕ್ಕೆ ಮೂರು ವರ್ಷ ತುಂಬಿದ ನೆಪವನ್ನಿಟ್ಟುಕೊಂಡು ಅವರು ಐದು ಗ್ಯಾರಂಟಿಗಳು ಹೇಗೆ ರಾಜ್ಯದ ಜನತೆಯ ಮನೆಯನ್ನು ನಂದಾದೀಪವನ್ನಾಗಿ ಮಾಡಿವೆ ಎಂದು ವಿವರಿಸಿದ್ದಾರೆ.

ಅವರ ಟ್ವೀಟ್‌ ವಿವರ ಹೀಗಿದೆ:

ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.

ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ನಾವು ಜಾರಿಗೆ ತಂದ ಗೃಹಜ್ಯೋತಿ ಯೋಜನೆ ಇಂದು ನಾಡಿನ ಪ್ರತಿ ಮನೆಯನ್ನು ಬೆಳಗುತ್ತಿದೆ. ಈ ಯೋಜನೆಯಡಿ  ರಾಜ್ಯದ ಒಟ್ಟು 1.64 ಕೋಟಿ ಕುಟುಂಬಗಳಿಗೆ ಮಾಸಿಕ ಗರಿಷ್ಠ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ ಯೋಜನೆಗಾಗಿ ₹26,115 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ.

ಯಾರೂ ಹಸಿವಿನಿಂದ ಮಲಗಬಾರದು ಎಂಬ ಸಂಕಲ್ಪದೊಂದಿಗೆ ಜಾರಿಗೊಂಡ ಅನ್ನಭಾಗ್ಯ ಯೋಜನೆಯು ಕೋಟ್ಯಂತರ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಭದ್ರತೆ ನೀಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಆಧಾರವಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಿಸಲು ಈವರೆಗೆ 18,897 ಕೋಟಿ ರೂ. ವ್ಯಯಿಸಲಾಗಿದ್ದು, 4.26 ಕೋಟಿ ಪಡಿತರದಾರರು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.

ನಾಡಿನ ಪ್ರತಿಯೊಬ್ಬ ಮಹಿಳೆಯೂ ಕೂಡ ಆರ್ಥಿಕ ಸಂಕಷ್ಟಗಳಿಂದ ಹೊರಬಂದು ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು ಎಂಬ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆಯು ಈಡೇರಿಸುತ್ತಿದೆ. ಸುಮಾರು 1.24 ಕೋಟಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ₹2,000 ಧನಸಹಾಯ ವರ್ಗಾವಣೆ ಮಾಡಲಾಗುತ್ತಿದ್ದು, ಈ ಯೋಜನೆಗಾಗಿ ಈವರೆಗೆ ₹74,216 ಕೋಟಿ ವ್ಯಯಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.