ಬೆಂಗಳೂರು: ನಮ್ಮ ಕುಟುಂಬದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ರಾಮಲಿಂಗಾರೆಡ್ಡಿ ಅವರು ಸಚಿವರು. ಅದನ್ನೂ ಮೀರಿ ನಾವಿಬ್ಬರೂ ಉತ್ತಮ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರ ಜತೆ ಶುಕ್ರವಾರ ತಡರಾತ್ರಿವರೆಗೂ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮಲಿಂಗಾರೆಡ್ಡಿ ಅವರು ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರೆಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ವಿಷಯ ಕುರಿತು ಏನು ಮಾತನಾಡಿದ್ದೇವೆ, ಬೇರೆ ಏನೆಲ್ಲಾ ವಿಚಾರ ಮಾತನಾಡಿದ್ದೇವೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ ಎಂದರು.
ರಾಮಲಿಂಗಾರೆಡ್ಡಿ ಅವರು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ. ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ ಅಷ್ಟೇ. ಆಗಿರುವ ಕೊರತೆಯನ್ನು ಸರಿಪಡಿಸುತ್ತೇವೆ. ಇಂತಹ ಬೆಳವಣಿಗೆಗಳು ಸರ್ವೇ ಸಾಮಾನ್ಯ. ಇದೆಲ್ಲಾ ಆಗುತ್ತಾ ಇರಬೇಕು. ಮಳೆ, ಗುಡುಗು, ಸಿಡಿಲು, ಸೂರ್ಯ ಮುಳುಗುವುದು, ಹುಟ್ಟುವುದು ಸಹಜ ಎಂದು ಹೇಳಿದರು.