2026-05-24 01:13:04

ಆನೇಕಲ್‌ ನಲ್ಲಿ ದೇಶದ 2ನೇ ಅತಿ ದೊಡ್ಡ ಸ್ಟೇಡಿಯಂಗೆ ಶಂಕುಸ್ಥಾಪನೆ; ಇಲ್ಲಿನ ಸೌಲಭ್ಯಗಳೇನು?|Speed News Kannada

ಆನೇಕಲ್‌ ನಲ್ಲಿ ದೇಶದ 2ನೇ ಅತಿ ದೊಡ್ಡ ಸ್ಟೇಡಿಯಂಗೆ ಶಂಕುಸ್ಥಾಪನೆ; ಇಲ್ಲಿನ ಸೌಲಭ್ಯಗಳೇನು?|Speed News Kannada

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ದೇಶದ 2ನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು.

ಈ ಐತಿಹಾಸಿಕ ಯೋಜನೆಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌, ಗೃಹಸಚಿವ ಡಾ. ಜಿ. ಪರಮೇಶ್ವರ್, ಗೃಹ ಮಂಡಳಿ ಅದ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಸಿಎಂ ಕಾನೂನು ಸಲಹೆಗಾರ ಪೊನಣ್ಣ, ಆನೇಕಲ್‌ ಶಾಸಕ ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.

ಶಿವಣ್ಣ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ‘ಬೆಳ್ಳಿ ಗದೆ’ಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.

ಸೂರ್ಯನಗರದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ದೇಶದ ಎರಡನೇ ದೊಡ್ಡ ಸ್ಟೇಡಿಯಂ ನಿರ್ಮಾಣವಾಗಲಿದೆ.

ಇನ್ನೆರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣ:

ಕರ್ನಾಟಕ ಗೃಹ ಮಂಡಳಿ ವತಿಯಿಂದ 100 ಎಕರೆ ಭೂಮಿಯಲ್ಲಿ, ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ಈ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. 80,000 ಆಸನಗಳ ಸಾಮರ್ಥ್ಯ ಇರುವ ಈ ಕ್ರೀಡಾಂಗಣದ ನಿರ್ಮಾಣ ಕೇವಲ 2 ರಿಂದ 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ಇಲ್ಲಿನ ಸೌಲಭ್ಯಗಳೇನು?;

ಒಳಾಂಗಣ ಕ್ರೀಡಾ ಸಂಕೀರ್ಣ : ಈ ಕ್ರೀಡಾಂಗಣದಲ್ಲಿ ಒಟ್ಟು 11 ಪ್ರಮುಖ ಕ್ರೀಡೆಗಳಿಗೆ ಜಾಗತಿಕ ಮಟ್ಟದ ವೇದಿಕೆ ಕಲ್ಪಿಸಲಾಗುತ್ತದೆ. ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್,  ಟೇಬಲ್ ಟೆನ್ನಿಸ್, ಸ್ಕ್ಯಾಷ್, ಕಬಡ್ಡಿ ಮತ್ತು ಖೋ-ಖೋ, ಜುಡೋ, ಟೈಕ್ವಾಂಡೋ, ಕುಸ್ತಿ, ಫೆನ್ಸಿಂಗ್ (ಕತ್ತಿವರಸೆ) ಮತ್ತು ವೇಟ್ ಲಿಫ್ಟಿಂಗ್ ಗೆ ಅವಕಾಶವಿದೆ.

2. ಹೊರಾಂಗಣ ಹಾಗೂ ಜಲಕ್ರೀಡಾ ಸೌಲಭ್ಯಗಳು:  ಕ್ರೀಪಟುಗಳಿಗಾಗಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ಟೆನ್ನಿಸ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್ ಕೋರ್ಟ್‌ಗಳನ್ನು ನಿರ್ಮಿಸಲಾಗುತ್ತದೆ. ಇತ್ತೀಚಿನ ಟ್ರೆಂಡ್ ಆಗಿರುವ ಪಾಡೆಲ್ ಮತ್ತು ಪಿಕಲ್‌ಬಾಲ್ ಆಟಗಳಿಗೂ ಇಲ್ಲಿ ಅತ್ಯಾಧುನಿಕ ಅಂಕಣ ಇರಲಿದೆ. ಈಜುಪಟುಗಳಿಗಾಗಿ ಅಂತರಾಷ್ಟ್ರೀಯ ಗುಣಮಟ್ಟದ ಈಜುಕೊಳ, ಹೈ-ಡೈವಿಂಗ್ ಪೂಲ್ ಹಾಗೂ ಪ್ರತ್ಯೇಕ ಅಭ್ಯಾಸ ಕೊಳ ಇರಲಿದೆ.

ಏಕಕಾಲಕ್ಕೆ 500ಕ್ಕೂ ಹೆಚ್ಚು ವಾಹನಗಳನ್ನು ಪಾರ್ಕ್ ಮಾಡಬಹುದಾದ ಸುಸಜ್ಜಿತ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಇದೆ. ಕ್ರೀಡಾ ಪ್ರೇಮಿಗಳಿಗಾಗಿ ವಾಣಿಜ್ಯ ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಗಳು, ಕ್ರೀಡಾ ಪರಿಕರಗಳ ಅಂಗಡಿ ಮತ್ತು ವಿಶಾಲವಾದ ಉಪಹಾರ ಗೃಹಗಳು ಇವೆ. ಆಟಗಾರರು, ಕೋಚ್‌ಗಳು ಹಾಗೂ ಕ್ರೀಡಾ ಸಿಬ್ಬಂದಿ ವಾಸ್ತವ್ಯ ಹೂಡಲು ಹೈಟೆಕ್ ವಸತಿ ಗೃಹಗಳು. ಗಣ್ಯರ ತುರ್ತು ಆಗಮನಕ್ಕಾಗಿ ಹೆಲಿಪ್ಯಾಡ್, ಸಾರ್ವಜನಿಕ ಪ್ಲಾಜಾ ಮತ್ತು ಸುತ್ತಲೂ ಆಕರ್ಷಕ ಹಸಿರು ವಲಯ ಇರಲಿದೆ.

Share:


Tags:

anekal stadium

Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.