ಶಿವಮೊಗ್ಗ: ಸಿದ್ದರಾಮಯ್ಯ ಬಿಟ್ಟು ಯಾರೇ ಮುಖ್ಯಮಂತ್ರಿ ಆದರೂ ರಾಜ್ಯದಲ್ಲಿ ಅವಧಿ ಪೂರ್ಣ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಯನ್ನು ಬದಲಾಯಿಸಲು ಮುಂದಾಗಿದೆ. ಈ ಬೆಳವಣಿಗೆ ದೇಶದಲ್ಲಿ ಕಾಂಗ್ರೆಸ್ ಅವನತಿಯ ಮುನ್ಸೂಚನೆಯಾಗಿದೆ. ನಿನ್ನೆ ದೆಹಲಿಯಲ್ಲಿ 5 ಗಂಟೆ ಸುದೀರ್ಘ ಸಭೆ ನಡೆದಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿದ್ದರಾಮಯ್ಯನವರ ರಾಜೀನಾಮೆಗೆ ಹೈಕಮಾಂಡ್ ಅನುಮೋದಿಸಿದೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ನೀಡಿ ಯಾರೇ ಮುಖ್ಯಮಂತ್ರಿಯಾದರೂ ಅವರ ಆಯ್ಕೆ ಅಷ್ಟು ಸುಲಭವಲ್ಲ. ಸರ್ಕಾರದಲ್ಲಿ ಗೊಂದಲ ಆರಂಭವಾಗಲಿದೆ. ಮುಖ್ಯಮಂತ್ರಿ ಬದಲಾವಣೆ ಬಳಿಕ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ಅತಿಹೆಚ್ಚು ಅನುಭವವಿರುವ ಮುಖ್ಯಮಂತ್ರಿ. ಆದರೂ ಅವರ ಅವಧಿಯಲ್ಲಿ ಹತ್ತು ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ವಾಲ್ಮೀಕಿ, ಮೂಡಾ ಹೀಗೆ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಪಾದಿಸಿದರು.