ಚಿತ್ರದುರ್ಗ: ಹಿರಿಯ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಕೋಟೆ ನಗರ ಚಿತ್ರದುರ್ಗ ಸಜ್ಜಾಗಿದೆ. ಎಲ್ಲೆಲ್ಲೂ ಕೇಸರಿ ಮತ್ತು ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ. ಇಂದು ನಡೆಯಲಿರುವ ಸಮಾರಂಭಕ್ಕೆ ಎಲ್ಲ ದಿಕ್ಕುಗಳಲ್ಲೂ ಬಂಟಿಂಗ್ಸ್, ಸ್ವಾಗತ ಕೋರುವ ಕಮಾನುಗಳು, ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.
ಮಧ್ಯಾಹ್ನ ಅಭಿಮಾನೋತ್ಸವ ಆರಂಭವಾಗಲಿದೆ. 10 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಸುಮಾರು 20 ಲಕ್ಷ ಚದರಡಿಯಷ್ಟು ಸಭಾಂಗಣ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷಕ್ಕೂ ಹೆಚ್ಚು ಅಧಿಕ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. 3 ವೇದಿಕೆಗಳಿದ್ದು, ಪ್ರಧಾನ ವೇದಿಕೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ಪ್ರಮುಖ ಸ್ವಾಮೀಜಿಗಳು ಆಸೀನರಾಗಲಿದ್ದಾರೆ.
ಸ್ವಾಮೀಜಿಗಳಿಗೆ ಮತ್ತೊಂದು ವೇದಿಕೆ, ರಾಜ್ಯದ ನಾಯಕರಿಗೆ ಇನ್ನೊಂದು ವೇದಿಕೆ ಸೇರಿ 3 ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲಾಗಿದೆ. ಹಿರಿಯ ಕಾರ್ಯಕರ್ತರು, ಅತಿ ಗಣ್ಯರು, ಗಣ್ಯರಿಗೆ ವಿಶೇಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. 10 ಲಕ್ಷ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ನೀರಿನ ಪೊಟ್ಟಣ, ಮಜ್ಜಿಗೆ ನೀಡಲಾಗುತ್ತದೆ
ವಿವಿಧ ರೀತಿಯ ರೈಸ್ ಬಾತ್, ಮೊಸರನ್ನ, ಮೈಸೂರು ಪಾಕ್ ಸ್ವೀಟ್ ಕೊಡಲಾಗುತ್ತದೆ. ಸುಮಾರು 700 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಲೊಕೇಶನ್ ಕ್ಯು ಆರ್ ಕೋಡ್ ಕಳಿಸಿ ಜಿಲ್ಲಾವಾರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
1 ಸಾವಿರ ಅತಿ ಗಣ್ಯರಿಗೆ ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ವಿತರಣೆಯನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಊಟದ ವಿಭಾಗದಲ್ಲಿ 1 ಸಾವಿರ ಸ್ವಯಂಸೇವಕರು ಇರಲಿದ್ದಾರೆ. ಸಭಾಂಗಣದಲ್ಲಿ 3 ಸಾವಿರ ಸ್ವಯಂಸೇವಕರು ಕೆಲಸ ಮಾಡುತ್ತಾರೆ. ಪಾರ್ಕಿಂಗ್ ವ್ಯವಸ್ಥೆಯಲ್ಲಿ 500 ಜನ ಸ್ವಯಂಸೇವಕರು ಕರ್ತವ್ಯ ನಿರ್ವಹಿಸುತ್ತಾರೆ. ವೈದ್ಯಕೀಯ ವ್ಯವಸ್ಥೆಗಾಗಿ 100 ವೈದ್ಯರ ತಂಡ, 25 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಯಡಿಯೂರಪ್ಪನವರ ಜೀವನ ಮತ್ತು ಹೋರಾಟಕ್ಕೆ ಸಂಬಂಧಿಸಿದಎರಡು ಕೃತಿಗಳನ್ನು ಬಿಡುಗಡೆಯಾಗಲಿದೆ.
4ಗಂಟೆಯ ವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಸಂಸದರು ಶಾಸಕರು ಬಾಗವಹಿಸಲಿದ್ದಾರೆ. ಕಳೆದ ಒಂದು ವಾರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಿತ್ರದುರ್ಗದಲ್ಲಿ ಬೀಡುಬಿಟ್ಟಿದ್ದು ಸಮಾರಂಭದ ಸಿದ್ದತೆಯ ಜವಬ್ದಾರಿ ವಹಿಸಿದ್ದಾರೆ.