ಶಿವಮೊಗ್ಗ: ಕಡಿಮೆ ಬೆಲೆಗೆ ಹಳೆಯ ಬಂಗಾರ ಮಾರುವುದಾಗಿ ವಂಚಿಸಿದ ಮಹಿಳೆಯರು ನಕಲಿ ಚಿನ್ನ ನೀಡಿ ಅಸಲಿ ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆನವೇರಿಯ ಚಿನ್ನದ ಅಂಗಡಿ ಮಾಲೀಕನ ಪತ್ನಿಗೆ ನಂಬಿಸಿದ ಅಪರಿಚಿತ ಮಹಿಳೆಯರು 35 ಗ್ರಾಂ ನಕಲಿ ಚಿನ್ನ ನೀಡಿ 1.60 ಲಕ್ಷ ರೂ.
ಮೌಲ್ಯದ 11 ಗ್ರಾಂ ಚಿನ್ನ ಪಡೆದು ವಂಚಿಸಿದ್ದಾರೆ. ಆನವೇರಿಯ ಪ್ರಕಾಶ್ ಜುವೆಲರ್ಸ್ ಮಾಲೀಕ ರಾಘವೇಂದ್ರ ಎಂ. ಶೇಟ್ ಅವರ ಪತ್ನಿ ಶೋಭಾ ಅವರು ಅಂಗಡಿಯಲ್ಲಿದ್ದಾಗ ಅಲ್ಲಿಗೆ ಬಂದಿದ್ದ ಮಹಿಳೆ ತನ್ನ ಬಳಿ ಇದ್ದ ಚಿನ್ನದ ಹಳೆಯ ಬಳೆ ಎಂದು ನಂಬಿಸಿ ನಕಲಿ ಬಳೆ ನೀಡಿ ಓಲೆ, ಜುಮ್ಕಿ ಸೇರಿದಂತೆ ವಿವಿಧ ಆಭರಣ ಪಡೆದುಕೊಂಡಿದ್ದಾಳೆ. ನಂತರ ಇನ್ನಿಬ್ಬರು ಮಹಿಳೆಯರನ್ನು ಅಂಗಡಿಗೆ ಕರೆತಂದು ಹಳೆಯ ಚಿನ್ನದ ಗುಂಡು ಎಂದು ನಕಲಿ ಚಿನ್ನ ನೀಡಿ ಎರಡು ಉಂಗುರ ಪಡೆದುಕೊಂಡು ಪರಾರಿಯಾಗಿದ್ದಾರೆ.
ಸಂಜೆ ಅಂಗಡಿಗೆ ಬಂದ ಮಾಲೀಕ ರಾಘವೇಂದ್ರ ಅವರು ಬಂಗಾರದ ಗುಂಡುಗಳನ್ನು ಪುಡಿ ಮಾಡಿ ಪರಿಶೀಲಿಸಿದಾಗ ನಕಲಿ ಚಿನ್ನ ಎಂದು ಗೊತ್ತಾಗಿದೆ. ಬಳಿಕ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.