2026-03-07 04:55:28

Chaluvarayaswamy | ಅಕ್ಕಿ ಉತ್ಪಾದನೆಯಲ್ಲಿ ಚೀನಾ ಮೀರಿಸಿದ್ದರೂ ರೈತರು ಸಂಕಷ್ಟದಲ್ಲಿದ್ದಾರೆ: ಸಚಿವ ಚಲುವರಾಯಸ್ವಾಮಿ ಕಳವಳ | Speed News Kannada

Chaluvarayaswamy  | ಅಕ್ಕಿ ಉತ್ಪಾದನೆಯಲ್ಲಿ ಚೀನಾ ಮೀರಿಸಿದ್ದರೂ ರೈತರು ಸಂಕಷ್ಟದಲ್ಲಿದ್ದಾರೆ: ಸಚಿವ ಚಲುವರಾಯಸ್ವಾಮಿ ಕಳವಳ | Speed News Kannada

ಬೆಂಗಳೂರು: 2017ರಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ಸಾವಯವ ಮತ್ತು ಸಿರಿಧಾನ್ಯ ಮೇಳವು ಇಂದು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಇದು ರಾಜ್ಯದ ಹೆಮ್ಮೆ. ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಹಾಗೂ ಸಿರಿಧಾನ್ಯಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಅವಳವಡಿಸಿಕೊಳ್ಳಲು ಇಂತಹ ಮೇಳಗಳು ಸಹಕಾರಿಯಾಗಿವೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಆಯೋಜಿಸಿದ್ದ, ಅಂತಾರಾಷ್ಟ್ರೀಯ ಕೃಷಿ ವ್ಯಾಪಾರ ಮೇಳದ ಪೂರ್ವಭಾವಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 2025ರಲ್ಲಿ ನಡೆದ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಲಕ್ಷಾಂತರ ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ಮೇಳದ ಯಶಸ್ಸಿಗೆ ಕಾರಣರಾಗಿದ್ದರು. ಜತೆಗೆ ಯುವ ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಹಾಗೂ ಸಿರಿಧಾನ್ಯಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಅವಳವಡಿಸಿಕೊಳ್ಳಲು ಈ ಹಿಂದಿನ ಮೇಳಗಳು ಯಶಸ್ಸು ಕಂಡಿವೆ ಎಂದರು.
ದೇಶದಲ್ಲಿ ಪ್ರಥಮವಾಗಿ ಉತ್ಪಾದನೋತ್ತರ ಕೃಷಿ-ರೈತರ ಸಬಲೀಕರಣ ಎಂಬ ಧ್ಯೇಯ ವಾಕ್ಯದೊಂದಿಗೆ ಅಂತರರಾಷ್ಟ್ರೀಯ ಸಮ್ಮೇಳನವನ್ನು ಇದೇ 6, 7 ಮತ್ತು 8 ರಂದು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ, ಹಾಗೂ ಬ್ರ್ಯಾಂಡಿಂಗ್‌ ಎಂಬ ಮೂರು ಉಪ ಧ್ಯೇಯಗಳೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ರೈತರಿಗೆ ನಿರಂತರ ಆದಾಯ ದೊರಕಿಸುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯಗಳ ಮರುಬಳಕೆ, ದೇಸಿ ತಳಿಗಳ ಸಂರಕ್ಷಣೆ, ಭೌಗೋಳಿಕ ಸೂಚ್ಯಂಕವಿರುವ ಉತ್ಪಾದನೆಗಳನ್ನು ಬಳಸುವ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಕೃಷಿ ಉತ್ಪಾದನೆ ನಂತರ ಮೌಲ್ಯವರ್ಧನೆಗೆ ಒತ್ತು ಕೊಡಲು ಈಗಾಗಲೇ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪಿಸಿದ್ದು, ಅದರ ಮೂಲಕ ರೈತರು ಕೃಷಿ ಸಂಸ್ಕರಣೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಈ ಹಿಂದೆ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಇಂದು ಬದಲಾದ ಸನ್ನಿವೇಶದಲ್ಲಿ ನಮ ದೇಶ ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದ್ದು ಇತರ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದೇವೆ. ಹಾಗೆಯೇ ಅಕ್ಕಿ ಉತ್ಪಾದನೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ್ದೇವೆ. ಆದರೂ ದೇಶಾದ್ಯಂತ ಹಲವು ರೈತರು ಸಾಲದ ಹೊರೆಯಲ್ಲಿ ಸಿಲುಕಿದ್ದಾರೆ. ರೈತರ ಆದಾಯ ಅಸ್ಥಿರತೆಯಿಂದ ಕೂಡಿದ್ದು, ಕೊಯ್ಲೋತ್ತರ ನಷ್ಟಗಳಂತಹ ಸಮಸ್ಯೆಗಳನ್ನು ಇನ್ನೂ ಎದುರಿಸುತ್ತಿದ್ದಾರೆ  ಎಂದು ಆತಂಕ ವ್ಯಕ್ತಪಡಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.