2026-07-23 06:13:15

Censor | Praveen Morchale | ಸೆನ್ಸಾರ್‌ ವಿರುದ್ಧ ಪ್ರವೀಣ್ ಮೋರ್ಚಾಲೆ ಮೌನ ಪ್ರತಿರೋಧ | Speed News Kannada

Censor | Praveen Morchale | ಸೆನ್ಸಾರ್‌ ವಿರುದ್ಧ ಪ್ರವೀಣ್ ಮೋರ್ಚಾಲೆ ಮೌನ ಪ್ರತಿರೋಧ | Speed News Kannada

ಬೆಂಗಳೂರು, 1 ಫೆಬ್ರವರಿ 2026: ಚಲನಚಿತ್ರ ನಿರ್ದೇಶಕ ಪ್ರವೀಣ್ ಮೋರ್ಚಾಲೆ ಅವರು ತಮ್ಮ ಇತ್ತೀಚಿನ 'ವೈಟ್ ಸ್ನೋ' ಚಿತ್ರವನ್ನು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಿದರು. ಸೆನ್ಸಾರ್‌ಶಿಪ್, ಕಲಾತ್ಮಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯ ಕುರಿತಾದ ಈ ಚಿತ್ರವು ಪ್ರೇಕ್ಷಕರ ಗಮನ ಸೆಳೆಯಿತು. ಒಬ್ಬ ಕಲಾವಿದನಾಗಿ ತಮ್ಮ ಮೇಲೆ ಗಾಢವಾದ ಪ್ರಭಾವ ಬೀರಿದ ನೈಜ ಘಟನೆಯಿಂದ ಪ್ರೇರಿತರಾಗಿ ಈ ಚಿತ್ರವನ್ನು ನಿರ್ಮಿಸಿರುವುದಾಗಿ ಮೋರ್ಚಾಲೆ ತಿಳಿಸಿದರು.

ಕಾಶ್ಮೀರದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಮೋರ್ಚಾಲೆ ಅವರಿಗೆ ಈ ಚಿತ್ರದ ಆಲೋಚನೆ ಮೂಡಿತಂತೆ. ಅಲ್ಲಿ ಅವರು ಒಬ್ಬ ಯುವ ಚಲನಚಿತ್ರ ನಿರ್ದೇಶಕನನ್ನು ಭೇಟಿಯಾಗಿದ್ದರಂತೆ. ಆ ಯುವಕ ನಿರ್ಮಿಸಿದ್ದ ಕಿರುಚಿತ್ರದಲ್ಲಿ ಹೆರಿಗೆಯ ನಂತರದ ರಕ್ತವನ್ನು ತೋರಿಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬ ಕಾರಣ ನೀಡಿ ಈ ನಿಷೇಧ ಹೇರಲಾಗಿತ್ತು. ಅಷ್ಟೇ ಅಲ್ಲದೆ, ಸಾಮಾಜಿಕ ಅಶಾಂತಿಗೆ ಕಾರಣವಾದ ಆರೋಪದ ಮೇಲೆ ಆ ಯುವಕನನ್ನು ಬಂಧಿಸಲಾಗಿತ್ತು. ಈ ಅನ್ಯಾಯವನ್ನು ಕಣ್ಣಾರೆ ಕಂಡ ಮೋರ್ಚಾಲೆ ಅವರು, ಹೆಚ್ಚುತ್ತಿರುವ ʼನಿಷೇಧ ಸಂಸ್ಕೃತಿʼ ವಿರುದ್ಧ ಸೃಜನಾತ್ಮಕವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದರು. ಆ ನೈಜ ಘಟನೆಗೆ ಕಾಲ್ಪನಿಕ ರೂಪ ನೀಡಿ ಈ ಸಿನಿಮಾ ಮಾಡಲಾಯಿತು ಎಂದರು.

ಈ ಚಿತ್ರದಲ್ಲಿ ಫಾತಿಮಾ ಪಾತ್ರದಲ್ಲಿ ಮಧು ಕಂಧಾರಿ, ಅಮೀರ್ ಆಗಿ ಭವ್ಯ ಖುರಾನಾ, ಕನೀಜ್ ಫಾತಿಮಾ ಆಗಿ ನೂರ್ ಮತ್ತು ಧಾರ್ಮಿಕ ಮುಖಂಡನ ಪಾತ್ರದಲ್ಲಿ ಖಾಚೋ ಅಹ್ಮದ್ ಖಾನ್ ನಟಿಸಿದ್ದಾರೆ. ಕಾಶ್ಮೀರದ ನಿರ್ಜನ ಪ್ರದೇಶಗಳಲ್ಲಿ ಚಿತ್ರೀಕರಿಸಲಾದ ಈ ಸಿನಿಮಾವು ಮೌನ, ನಿಸರ್ಗ ಮತ್ತು ಸಂಯಮದ ನಟನೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಇಲ್ಲಿ ಪ್ರಕೃತಿಯು ಕೇವಲ ಹಿನ್ನೆಲೆಯಾಗಿರದೆ, ಕಥೆಯ ವೇಗ ಮತ್ತು ಮೂಡ್ ಅನ್ನು ನಿರ್ಧರಿಸುವ ಜೀವಂತ ಪಾತ್ರವಾಗಿ ಕೆಲಸ ಮಾಡಿದೆ ಎಂದು ಮೋರ್ಚಾಲೆ ವಿವರಿಸಿದರು.

ಚಿತ್ರೋತ್ಸವದಲ್ಲಿ ಮಾತನಾಡಿದ ಮೋರ್ಚಾಲೆ, ʼಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಭೌತಿಕ ಅಗತ್ಯಗಳಿಗಿಂತಲೂ ಮುಖ್ಯ. ನನಗೆ ಮಾತನಾಡಲು ಸಾಧ್ಯವಾಗದಿದ್ದರೆ, ನಾನು ಸತ್ತಂತೆಯೇ ಸರಿ. ಕಲಾವಿದರು ಯಾವುದೇ ಭಯವಿಲ್ಲದೆ ಸಮಾಜವನ್ನು ಪ್ರಶ್ನಿಸುವ ಮತ್ತು ಪ್ರತಿಬಿಂಬಿಸುವ ಸ್ವಾತಂತ್ರ್ಯ ಹೊಂದಿರಬೇಕುʼ ಎಂದರು. ಸಮಕಾಲೀನ ಭಾರತದಲ್ಲಿ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ʼಮೌನ ಮತ್ತು ತೃಪ್ತಿಯನ್ನು ಸವಾಲು ಮಾಡುವಲ್ಲಿ ಸಿನಿಮಾ ಮತ್ತು ಕಲೆ ನಿರ್ಣಾಯಕ ಪಾತ್ರ ವಹಿಸುತ್ತವೆʼ ಎಂದು ಅಭಿಪ್ರಾಯಪಟ್ಟರು.

ಸಮಾಜದಲ್ಲಿ ಸಿನಿಮಾದ ವಿಸ್ತಾರವಾದ ಪಾತ್ರದ ಬಗ್ಗೆ ಮಾತನಾಡಿದ ಅವರು, ʼಸಿನಿಮಾಗಳು ಕೇವಲ ಅಲ್ಪಾವಧಿಯ ಮನರಂಜನೆಯಲ್ಲ. ಅವು ಆಯಾ ಕಾಲದ ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳನ್ನು ಸೆರೆಹಿಡಿಯುವ ಸಾಂಸ್ಕೃತಿಕ ದಾಖಲೆಗಳಾಗಿವೆ. ಚಿತ್ರನಿರ್ಮಾಪಕರು ಮತ್ತು ಪ್ರೇಕ್ಷಕರು ಕೇವಲ ವಾಣಿಜ್ಯ ಲಾಭದ ಬಗ್ಗೆ ಯೋಚಿಸದೆ ಸಾಮಾನ್ಯ ಜನರ ಮತ್ತು ಅಂಚಿನಲ್ಲಿರುವವರ ಕಥೆಗಳನ್ನು ಬೆಂಬಲಿಸಬೇಕು. ಚಲನಚಿತ್ರೋತ್ಸವಗಳು ಪ್ರಮುಖ ವೇದಿಕೆಯಾಗಿದ್ದರೂ, ಅರ್ಥಪೂರ್ಣ ಚಿತ್ರಗಳ ಉಳಿವು ಪ್ರೇಕ್ಷಕರು ಅವುಗಳನ್ನು ಎಷ್ಟು ಬೆಂಬಲಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿದೆ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.