ಬೆಂಗಳೂರು: ಬೆಂಗಳೂರಿನ ಕೆಆರ್ ಸರ್ಕಲ್ ನಲ್ಲಿ ಬಸ್‌ಗೆ ಮತ್ತೊಂದು ಬಿಎಂಟಿಸಿ (Bmtc )ಬಸ್ ಡಿಕ್ಕಿ ಕೇಸ್ ಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ. ಸಿಗ್ನಲ್ ನಿಯಮ ಉಲ್ಲಂಘಿಸಿ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು.ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಂತಿನಗರ 3ನೇ ಬಿಎಂಟಿಸಿ ಡಿಪೋಗೆ ಸೇರಿದ ಬಸ್ ಚಾಲಕ ಅಭಿಷೇಕ್ (KA 51 AJ 6163) ಅಪಘಾತಕ್ಕೆ ಕಾರಣನಾಗಿದ್ದಾನೆ. ಕೆಆರ್ ಸರ್ಕಲ್‌ನಲ್ಲಿ ರೆಡ್ ಸಿಗ್ನಲ್ ಬಿದ್ದಿದ್ದರಿಂದ ಎಲ್ಲ ವಾಹನಗಳು ಸಾಲಾಗಿ ನಿಂತಿದ್ದವು. ಈ ವೇಳೆ ನಿಯಮ ಗಾಳಿಗೆ ತೂರಿದ ಅಭಿಷೇಕ್, ವೇಗವಾಗಿ ಬಸ್ ಚಲಾಯಿಸಿ ಮುಂದೆ ನಿಂತಿದ್ದ ಬಸ್‌ಗೆ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ದೂರುದಾರರ ಕಾಲಿನ ಮೂಳೆ ಮುರಿದಿದ್ದು, ಶರಣಮ್ಮ ಎಂಬ ಮಹಿಳೆಯ ದವಡೆ ಹಲ್ಲು ಮುರಿದಿದೆ. ಚಾಲಕ ಪ್ರಕಾಶ್‌ಗೂ ಗಂಭೀರ ಗಾಯಗಳಾಗಿವೆ.
ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಘಟನೆಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಅಪಘಾತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ದೂರಿನ ಮೇರೆಗೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕ ಅಭಿಷೇಕ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.