ಬೆಂಗಳೂರು: ಯಾವುದೇ ಸಮುದಾಯ ಬೇಡಿಕೆಯನ್ನು ಇರಿಸದಿದ್ದರೂ ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿ ಧರ್ಮದ ಆಧಾರದಲ್ಲಿ ಮಕ್ಕಳಲ್ಲಿ ಬೇಧ ಭಾವ ಹುಟ್ಟುಹಾಕುತ್ತಿದೆ. ಇದನ್ನು ಹಿಂಪಡೆದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೂಡುವ ಆತಂಕ ಮತ್ತು ಭೇದಭಾವಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸಂಸದ ಬಸರವಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1980 ರ ಶಾಲಾ ಸಮವಸ್ತ್ರ ಕಾನೂನು ಅಡಿಯಲ್ಲಿ ನಮ್ಮ ಅವಧಿಯಲ್ಲಿ ಆ ಸ್ಪಷ್ಟೀಕರಣದ ಆದೇಶವನ್ನು ಮಾಡಲಾಗಿತ್ತು. ಅದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ನಲ್ಲಿಯೂ ಅದು ವಿಭಜಿತ ತೀರ್ಪು ಆಗಿತ್ತು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗಲೇ ಮಕ್ಕಳಲ್ಲಿ ಮತ್ತೆ ಬೇಧ ಭಾವ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಯಾವುದೇ ಸ್ಪಷ್ಟವಾದ ನೀತಿ ಇಲ್ಲ. ಶಿಕ್ಷಕರ ಕೊರತೆಯಂತಹ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಇಂತಹ ಆದೇಶ ಮಾಡಿದ್ದಾರೆ. ಈಗ ಏಕಾಏಕಿ ಮಾಡಿರುವುದು ತುಷ್ಟೀಕರಣದ ರಾಜಕಾರಣ ಬಿಟ್ಟರೇ ಮತ್ತೇನು ಅಲ್ಲ. ಹಿಜಾಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಸೌದಿ ಅರೇಬಿಯಾ, ಇರಾನ್ ಸೇರಿದಂತೆ ಇತರ ದೇಶದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ತೊರೆದು ನಿತ್ಯ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಮಾತ್ರ ಇಂತಹ ಕಾನೂನು ಮಾಡಿರುವುದು ಸರಿಯಲ್ಲ ಎಂದಿದ್ದಾರೆ.