ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಮಾಜಿ ಐಪಿಎಸ್ ಆಧಿಕಾರಿ ಕೆ. ಅಣ್ಣಾಮಲೈ ಇದೀಗ ಉಸ್ತುವಾರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ತಮಿಳುನಾಡಿನ 6 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಅಣ್ಣಾಮಲೈ ಅವರಿಗೆ ವಹಿಸಲಾಗಿತ್ತು. ಇದೀಗ ಈ ಜವಬ್ದಾರಿಗಳಿಂದಲೂ ಹೊರಬಂದು ಅಚ್ಚರಿ ಮೂಡಿಸಿದ್ದಾರೆ.
ಇವರಿಗೆ ಸಿಂಗನಲ್ಲೂರು, ಮಧುರೆ ದಕ್ಷಿಣ, ವಿರುಂಗಂಪಾಕಂ, ಕಾರೈಕುಡಿ, ಶ್ರೀವೈಕಂಠಮ್, ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ತಂದೆಯ ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ತಂದೆಗೆ ಅನಾರೋಗ್ಯವಿದೆ. ಅವರ ಆರೈಕೆ ನನಗೆ ಮುಖ್ಯವಾಗಿದ್ದು, ಕೊಯಂಬತ್ತೂರಿನಲ್ಲಿ ಉಳಿಯಬೇಕಾಗಿದೆ. 6 ಕ್ಷೇತ್ರಗಳಿಗೆ ಪ್ರವಾಸ ಮಾಡುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮೇಲೆ ಅಪಾರ ವಿಶ್ವಾಸ ಇಟ್ಟು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದ ಅವರು ಹೊಸ ಪಕ್ಷ ಕಟ್ಟುವ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಕೃಷಿ ಕುಟುಂಬದಿಂದ ಬಂದ ನನಗೆ ಆ ಸಾಮರ್ಥ್ಯವೂ ಇಲ್ಲ ಎಂದು ಉತ್ತರಿಸಿದ್ದಾರೆ.