ಬಾಗಲಕೋಟೆ: ಶಾಸಕರು ಅನುದಾನ ಕೇಳಿದರೆ ಅವರಿಗೆ ಅನುದಾನ ಭಾಗ್ಯ ಕರುಣಿಸುತ್ತಿಲ್ಲ. ಬದಲಾಗಿ ಆಡಳಿತ ಪಕ್ಷದ ಶಾಸಕರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ವಿದೇಶ ಪ್ರವಾಸದ ಭಾಗ್ಯ ಕಲ್ಪಿಸಿಕೊಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಮಾಧ್ಯಮದವರು ಚಾಟಿ ಬೀಸುತ್ತಾರೆ; ವಿಪಕ್ಷದವರು ಕೇಳುತ್ತಾರೆಂದು ಸರಕಾರದಿಂದ ಯಾವುದೇ ಹಣ ಕೊಡುವುದಿಲ್ಲ ಎಂದು ಹೇಳುತ್ತಾರೆ. ಸರಕಾರ ನೇರವಾಗಿ ಕೊಡಬೇಕೆಂದಿಲ್ಲ. ಮೊನ್ನೆ ಜಮೀರ್ ಅಹ್ಮದ್ ಅವರು ಬಳ್ಳಾರಿಯಲ್ಲಿ ಅವರ ಕಾರ್ಯಕರ್ತ ಹತ್ಯೆ ಆದಾಗ 25 ಲಕ್ಷ ರೂ. ಪರಿಹಾರ ಕೊಟ್ಟಿದ್ದರು. ಜಮೀರ್ ಅಹ್ಮದ್ ಅವರು ಅವರ ದುಡ್ಡು ಕೊಟ್ಟಿಲ್ಲ. ಯಾವ ದುಡ್ಡೆಂದು ಬರುವ ದಿನಗಳಲ್ಲಿ ಹೇಳುತ್ತೇನೆ ಎಂದರು.
ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳಿಸಿ ಇನ್ನೆಷ್ಟು ದಿನ ಅಧಿಕಾರದಲ್ಲಿ ಉಳಿಯುತ್ತಾರೆಂದು ನನಗೆ ತಿಳಿದಿಲ್ಲ. ಈ ಆಡಳಿತ ವ್ಯವಸ್ಥೆ ಬಗ್ಗೆ ಜನ ಈ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಅನುದಾನ ಸಿಗದೇ ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ ಎಂದು ಹಿರಿಯ ಶಾಸಕ ರಾಜು ಕಾಗೆ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಅವರು ಹೇಳಿದ್ದಾರೆ ಎಂದು ಗಮನ ಸೆಳೆದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಸೇರಿ ಎಲ್ಲರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ತಮ್ಮ ಸಮುದಾಯಗಳಿಗೆ ನ್ಯಾಯ ಸಿಗಲಿದೆ ಎಂಬ ಅಭಿಲಾಷೆ ಇಟ್ಟುಕೊಂಡಿದ್ದರು. ಆದರೆ ಈಗ ನಿರಾಶೆಯಾಗಿದೆ ಎಂದರು.
ಕಾಂಗ್ರೆಸ್ ಸರಕಾರದ ಕಳೆದ ಎರಡೂವರೆ ವರ್ಷದ ಆಡಳಿತ ವೈಖರಿ ನೋಡಿದರೆ ಮುಖ್ಯಮಂತ್ರಿಗಳು ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ. ಅಹಿಂದ ನಾಯಕರೆಂದು ಹೇಳಿಕೊಂಡು ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆಯೇ ವಿನಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳನ್ನು ಸೇರಿಸಿದಂತೆ ಶೋಷಿತ ಸಮುದಾಯಗಳನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೇಕಾರರ 25 ಸಾವಿರ ವರೆಗಿನ ಸಾಲ ಮನ್ನಾ ಮಾಡಿದ್ದರು. ನೇಕಾರರ ಸುಧಾರಣೆಗೆ ಪ್ರತ್ಯೇಕ ಪ್ಯಾಕೇಜ್ ನೀಡಿದ್ದರು. 2 ಎಚ್‍ಪಿ ವರೆಗೆ ಉಚಿತ ವಿದ್ಯುತ್ ಕೊಟ್ಟಿದ್ದರು. ಹಳೆ ಕೈಮಗ್ಗಗಳಿಗೆ ಸಬ್ಸಿಡಿ ನೀಡಿ ಹೊಸತು ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರು ಎಂದರು.
ಡಿಕೆಶಿ ಜೊತೆ ಕೈ ಜೋಡಿಸುವ ದುಸ್ಥಿತಿ ಬಿಜೆಪಿಗೆ ಇಲ್ಲ..
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆ ಬಿಜೆಪಿ ಕೈ ಜೋಡಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ದುಸ್ಥಿತಿ ಬಿಜೆಪಿಗೆ ಬಂದಿಲ್ಲ. ಬಿಜೆಪಿಗೆ ಕಾರ್ಯಕರ್ತರ ಶಕ್ತಿ ಇದೆ, ನಾಯಕರ ದಂಡು ಇದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿ ನಮ್ಮ ಕಾರ್ಯಕರ್ತರಿಗೆ ಇದೆ. ನಾವು ಒಟ್ಟಾಗಿ ಸಾಗುತ್ತೇವೆ ಎಂದರು.